ತುಮಕೂರು: ಇತ್ತೀಚಿಗೆ ಯುವ ಜನತೆಯಲ್ಲಿ (young people) ಹೃದಯಘಾತ (heart attacks) ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಗುಬ್ಬಿ ತಾಲೂಕಿನ ನಿಟ್ಟೂರಿನ ವಿನಾಯಕ ಕಾಲೇಜಿನಲ್ಲಿ 17 ವರ್ಷದ ಶಮಂತ್ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಆರೋಗ್ಯವಂತ ಯುವಕ, ಯುವತಿಯರೇ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಇತ್ತೀಚಿಗಷ್ಟೇ ಚಾಮರಾಜನಗರದಲ್ಲಿ (Chamarajanagar) 3ನೇ ತರಗತಿಯಲ್ಲಿ ಓದುತ್ತಿರುವ 8 ವರ್ಷದ ಬಾಲಕಿ ಶಾಲೆಯಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದಳು. ಆ ಘಟನೆ ಮಾಸುವ ಮುನ್ನವೇ ಪ್ರಥಮ ಪಿಯುಸಿ ಓದುತ್ತಿದ್ದ ಕಾಲೇಜ್ ವಿದ್ಯಾರ್ಥಿಯೊಬ್ಬ (1st PUC Collage Student) ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಇಂದು ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿ ಶಮಂತ್ ಎಲ್ಲರೊಂದಿಗೆ ಚೆನ್ನಾಗಿಯೇ ಮಾತನಾಡಿದ್ದ. ಆದರೆ, ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ, ಮಾರ್ಗ ಮಧ್ಯೆ ಶಮಂತ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.