ಜೆರುಸಲೇಂ: ಒಂದೆಡೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದರೆ, ಮತ್ತೊಂದು ಕಡೆ ಗಾಜಾ ಮೇಲಿನ ಇಸ್ರೇಲ್ ದಾಳಿಯೂ ಮುಂದುವರಿದಿದೆ. ಈಗ ಹಮಾಸ್ ಉಗ್ರರಿಗೆ ಹೊಸ ಎಚ್ಚರಿಕೆಯೆಂಬಂತೆ, “ಒತ್ತೆಯಾಳುಗಳನ್ನು ಕೂಡಲೇ ಬಿಡುಗಡೆ ಮಾಡಿ, ಇಲ್ಲವೇ ಸರ್ವನಾಶ ಎದುರಿಸಿ” ಎಂದು ಇಸ್ರೇಲ್ ಹೇಳಿದೆ. ಇದು ಅಂತಿಮ ಸಂದೇಶ ಎಂದೂ ಎಚ್ಚರಿಸಿದೆ. “ಗಾಜಾದ ಮೇಲೆ ಪ್ರಬಲ ಚಂಡಮಾರುತ ಅಪ್ಪಳಿಸಲಿದೆ” ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಎಚ್ಚರಿಕೆ ನೀಡಿದ್ದು, ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.
ಸಚಿವ ಇಸ್ರೇಲ್ ಕಾಟ್ಜ್ ಅವರು ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಹಮಾಸ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ. “ಇಂದು ಗಾಜಾ ನಗರದ ಮೇಲೆ ಪ್ರಬಲ ಚಂಡಮಾರುತ ಅಪ್ಪಳಿಸಲಿದೆ ಮತ್ತು ಭಯೋತ್ಪಾದಕರ ಗೋಪುರಗಳ ಛಾವಣಿಗಳು ಉರುಳಲಿವೆ” ಎಂದು ಅವರು ಬರೆದುಕೊಂಡಿದ್ದಾರೆ.
“ಗಾಜಾದಲ್ಲಿ ಮತ್ತು ವಿದೇಶದ ಐಷಾರಾಮಿ ಹೋಟೆಲ್‌ಗಳಲ್ಲಿರುವ ಹಮಾಸ್‌ನ ಕೊಲೆಗಡುಕರು ಮತ್ತು ಅತ್ಯಾಚಾರಿಗಳಿಗೆ ಇದು ಅಂತಿಮ ಎಚ್ಚರಿಕೆ: ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಮತ್ತು ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡಿ—ಇಲ್ಲದಿದ್ದರೆ ಗಾಜಾ ನಾಶವಾಗುತ್ತದೆ ಮತ್ತು ನಿಮ್ಮನ್ನು ಸರ್ವನಾಶ ಮಾಡಲಾಗುವುದು,” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳು (IDF) ತಮ್ಮ ಯೋಜನೆಯ ಪ್ರಕಾರ ಕಾರ್ಯಾಚರಣೆಗಳನ್ನು ಮುಂದುವರಿಸುತ್ತಿವೆ ಮತ್ತು ಗಾಜಾದಲ್ಲಿ ಹಮಾಸ್ ಅನ್ನು ನಿರ್ಣಾಯಕವಾಗಿ ಸೋಲಿಸುವ ಗುರಿಯೊಂದಿಗೆ ತಮ್ಮ ಭೂ ಕಾರ್ಯಾಚರಣೆಯನ್ನು ವಿಸ್ತರಿಸಲು ಸಿದ್ಧತೆ ನಡೆಸುತ್ತಿವೆ ಎಂದು ಕಾಟ್ಜ್ ಒತ್ತಿ ಹೇಳಿದ್ದಾರೆ.
ಹೆಚ್ಚುತ್ತಿರುವ ಉದ್ವಿಗ್ನತೆ, ನಿರಂತರ ವೈಮಾನಿಕ ದಾಳಿಗಳು ಮತ್ತು ಮುತ್ತಿಗೆ ಹಾಕಲ್ಪಟ್ಟ ಪ್ರದೇಶದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಕಳವಳದ ನಡುವೆಯೇ ಇಸ್ರೇಲ್ ನಿಂದ ಈ ಎಚ್ಚರಿಕೆಯ ಸಂದೇಶ ಬಂದಿದೆ.