ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡಿ ರೈಲಿನ ಮೂಲಕ ಬರುತ್ತಿದ್ದ ಬೆಳಗಾವಿಯ ವ್ಯಕ್ತಿಗೆ ಹೃದಯಾಘಾತವಾಗಿ ರೈಲಿನಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ರವಿ ಜಟಾರ(61) ಸಾವನ್ನಪ್ಪಿರುವ ವ್ಯಕ್ತಿ. ಮೃತ ವ್ಯಕ್ತಿ ಬೆಳಗಾವಿಯ ದೇಶಪಾಂಡೆ ಗಲ್ಲಿ ನಿವಾಸಿ ಎನ್ನಲಾಗಿದೆ. ಪ್ರಯಾಗ್ರಾಜ್ ನಿಂದ ಬೆಳಗಾವಿಗೆ ರೈಲಿನಲ್ಲಿ ಬರುವಾಗ ಪುಣೆಯಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಬೆಳಗಾವಿ ನಗರದಿಂದ ನೂರಕ್ಕೂ ಅಧಿಕ ಜನರು ಕುಂಭಮೇಳಕ್ಕೆ ಹೋಗಿದ್ದರು.
ಕುಂಭ ಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಬೆಳಗಾವಿಯ ವಡವಾಗಿಯ ನಿವಾಸಿಗಳಾದ ತಾಯಿ ಜ್ಯೋತಿ ಹತ್ತರವಾಠ, ಮಗಳು ಮೇಘನಾ ಹತ್ತರವಾಠ, ಶೆಟ್ಟಿಗಲ್ಲಿಯ ನಿವಾಸಿ ಅರುಣ್ ಕೋಪಾರ್ಡೆ ಮತ್ತು ಶಿವಾಜಿ ನಗರದ ನಿವಾಸಿ ಮಾಧುರಿ ಊರ್ಫ್ ಮಹಾದೇವಿ ಬಾವನೂರು ಸಾವನ್ನಪ್ಪಿದ್ದರು. ಈಗ ಮತ್ತೋರ್ವ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿರುವ ಮಹಾ ಕುಂಭ ಮೇಳ ಆರಂಭವಾಗಿ 16 ದಿನ ಕಳೆದರೂ ಯಾವುದೇ ಆತಂಕವಿಲ್ಲದೆ ನಿರಂತರವಾಗಿ ನಡೆದಿತ್ತು. ಪ್ರತಿ ದಿನ ಕೋಟ್ಯಾಂತರ ಭಕ್ತರು ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದರು. ಆದರೆ ಮೌನಿ ಅಮಾವಾಸ್ಯೆ ಅಂಗವಾಗಿ ನಡೆದ ಮಾಘ ಸ್ನಾನಕ್ಕೆ 8 ಕೋಟಿಗೂ ಹೆಚ್ಚು ಜನ ಧಾವಿಸಿದ್ದರು. ಈ ವೇಳೆ ಜನ ಜಂಗುಳಿ ಉಂಟಾಗಿ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ಬ್ಯಾರಿಕೇಡ್ ಮೇಲೆ ಬಿದ್ದ ಭಕ್ತರಿಂದ ಕಾಲ್ತುಳಿತ ಸಂಭವಿಸಿತ್ತು. ಪರಿಣಾಮ 40ಕ್ಕೂ ಅಧಿಕ ಜನರು ಸಾವನ್ನಪ್ಪಿ, 66ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.