ಮಂಡ್ಯ : ತಾಲೂಕಿನ ಮಂಗಲದ ಲಕ್ಷ್ಮಮ್ಮ ಮತ್ತು ಎಂ. ಕೆ ಶಿವಣ್ಣ ಅವರ ಮಗಳು ಯಶಸ್ವಿನಿ ಎಂ. ಎಸ್. ಮತ್ತು ಹುಲ್ಕೆರೆಕೊಪ್ಪಲು ಗ್ರಾಮದ ಸುಶೀಲಮ್ಮ ಮತ್ತು ಚಿಂದೇಗೌಡರ ಮಗ ಸಿ. ಸೋಮಶೇಖರ್ ಅವರು ಸಸಿ ನೆಟ್ಟು, ರಕ್ತದಾನ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತಾಲೂಕಿನ ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯಂತೆ ಶ್ರೀನಾದನಂದನಾಥಸ್ವಾಮಿ, ನಟ ಚೇತನ್ ಅಹಿಂಸಾ ಹಾಗೂ ನಟಿ ಪೂಜಾ ಗಾಂಧಿ ಸೇರಿದಂತೆ ಇತರ ಗಣ್ಯರ ಸಮ್ಮುಖದಲ್ಲಿ ವಿವಾಹವಾದರು.
ಈ ಕುರಿತು ನಟ ಚೇತನ್ ಅಹಿಂಸಾ ಅವರು ಮಾತನಾಡಿ, ”ಚಳವಳಿಯ ಭೂಮಿ ಮಂಡ್ಯದಲ್ಲಿ ಶತಮಾನದ ಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪ್ರೇರಿತವಾದ ಮದುವೆಗೆ ಬಂದಿದ್ದೇವೆ. ಈ ಮೂಲಕ ವೈಜ್ಞಾನಿಕತೆ, ಸಮಾನತೆ, ಆಡಂಬರವಿಲ್ಲದ ಸರಳ ವಿವಾಹಕ್ಕೆ ಇದೊಂದು ಮಾದರಿಯಾಗಿದೆ. ವೈಯಕ್ತಿಕವಾಗಿ ಮಾತ್ರವಲ್ಲದೇ, ವ್ಯವಸ್ಥಿತವಾಗಿಯೂ ನಾವು ಸಮ ಸಮಾಜವನ್ನು ನಿರ್ಮಾಣ ಮಾಡಬೇಕು” ಎಂದು ಕರೆ ನೀಡಿದರು.


















