ಬೆಂಗಳೂರು | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ನಲ್ಲಿ ಇದೀಗ ಸಾಮಾಜಿಕ ನ್ಯಾಯದ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಗುಣಮಟ್ಟದ ಆಹಾರ ಮತ್ತು ಸೇವೆಯಲ್ಲಿ ಕೆಲವು ಕಾಲದಿಂದ ಉಂಟಾಗಿದ್ದ ಅಸಮಾಧಾನಕ್ಕೆ ಪರಿಹಾರ ಕಂಡುಹಿಡಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಾಯಕಲ್ಪದ ಹೆಜ್ಜೆ ಇಟ್ಟಿದೆ.
ರಾಜ್ಯದಲ್ಲಿ ಈಗಾಗಲೇ ಉದ್ಯೋಗದ ಬಗ್ಗೆ ಭುಗಿಲೆದ್ದ ಹೋರಾಟದ ನಡುವೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಂಧರು, ವಿಕಲಚೇತನರು ಸೇರಿದಂತೆ ವಿವಿಧ ವಿಶೇಷ ಚೇತನರಿಗೆ ಉದ್ಯೋಗ ನೀಡುವ ಯೋಜನೆಗೆ ಜಿಬಿಎ ರೂಪುರೇಷೆ ಸಿದ್ಧಪಡಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಆಯ್ದ ಸಂಘ ಸಂಸ್ಥೆಗಳ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಿ ಜಿಬಿಎ ವತಿಯಿಂದ ವಿಶೇಷ ತರಬೇತಿ ನೀಡಿದ
ನಂತರ ಕ್ಯಾಂಟೀನ್‌ಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಜಿಬಿಎ ನಿರ್ಧರಿಸಿದೆ.
ಈ ಮೂಲಕ ಕ್ಯಾಂಟೀನ್‌ಗಳಿಗೆ “ಸಾಮಾಜಿಕ ಸ್ಪರ್ಶ” ನೀಡುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕೆಲವು ಖಾಸಗಿ ಹೋಟೆಲ್‌ಗಳು ವಿಶೇಷಚೇತನರಿಗೆ ಉದ್ಯೋಗ ನೀಡಿ ಮಾದರಿ ನಿರ್ಮಿಸಿರುವ ಹಿನ್ನೆಲೆಯಲ್ಲಿ, ಅದೇ ಮಾದರಿಯನ್ನು ಸರ್ಕಾರದ ಯೋಜನೆಯಲ್ಲಿ ಜಾರಿಗೆ ತರಲು ಮುಂದಾಗಿದೆ. ಇತ್ತೀಚೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಆಹಾರ ತಯಾರಿಕೆ ಮತ್ತು ಪೂರೈಕೆ ವಿಚಾರದಲ್ಲಿ ಹೊಸ ವ್ಯವಸ್ಥೆ ರೂಪಿಸಲು ಚರ್ಚೆಗಳು ನಡೆಯುತ್ತಿವೆ.
ಈ ಸಂಬಂಧ ಇಸ್ಕಾನ್ (ISKCON) ಸಂಸ್ಥೆಯೊಂದಿಗೆ ಮಾತುಕತೆ ನಡೆದಿದ್ದು, ಸಮರ್ಪಕ ಗುಣಮಟ್ಟದ ಆಹಾರ ಪೂರೈಕೆಗೆ ಸಹಕಾರದ ಬಗ್ಗೆ ಚರ್ಚಿಸಲಾಗಿದೆ. ಆದರೆ, ಇಸ್ಕಾನ್ ಸಂಸ್ಥೆ ಊಟದ ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿರುವುದರಿಂದ, ದರ ಮತ್ತು ಗುಣಮಟ್ಟದ ಸಮತೋಲನ ಸಾಧಿಸುವುದು ಜಿಬಿಎ ಮುಂದೆ ಸವಾಲಾಗಿದೆ.
ಒಂದು ಕಡೆ ಸಾಮಾಜಿಕ ನ್ಯಾಯದ ಹೆಜ್ಜೆ, ಮತ್ತೊಂದು ಕಡೆ ಗುಣಮಟ್ಟದ ಆಹಾರ ಒದಗಿಸುವ ಸವಾಲು, ಇಂದಿರಾ ಕ್ಯಾಂಟೀನ್‌ಗಳ ಮೂಲಕ ಬಡಜನರಿಗೆ ಅಗ್ಗದ ದರದಲ್ಲಿ ಆಹಾರ ಒದಗಿಸುವ ಜೊತೆಗೆ, ವಿಶೇಷ ಚೇತನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಜಿಬಿಎ ಹೊಸ ಮಾದರಿ ರೂಪಿಸಲು ಮುಂದಾಗಿದೆ. ಈ ಪ್ರಯತ್ನ ಯಶಸ್ವಿಯಾದರೆ, ಇಂದಿರಾ ಕ್ಯಾಂಟೀನ್‌ಗಳು ಕೇವಲ ಅನ್ನದಾಸೋಹ ಕೇಂದ್ರಗಳಲ್ಲ, ಸಾಮಾಜಿಕ ಒಳಗೊಳ್ಳುವಿಕೆಯ ಪ್ರತೀಕವಾಗಲಿವೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಸಿದ್ಧಾರೆ.
ಇದನ್ನೂ ಓದಿ : ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಮೈಲಾರಪ್ಪ ವಿರುದ್ಧ ಮತ್ತೊಂದು ದೂರು!



















