ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ನಟ ದರ್ಶನ್ ಸೇರಿದಂತೆ ಆರೋಪಿಗಳು ಹೊರಗಿದ್ದಾರೆ. ದರ್ಶನ್ ವಿದೇಶಕ್ಕೆ ಹಾರಿ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ, ದರ್ಶನ್ ಸೇರಿದಂತೆ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಇಂದು ಮಹತ್ವದ ವಿಚಾರಣೆ ನಡೆಯಲಿದೆ.
ನ್ಯಾ. ಪರ್ದಿವಾಲಾ, ನ್ಯಾ. ಮಹದೇವನ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ದರ್ಶನ್ ಅವರ ಭವಿಷ್ಯ ನಿರ್ಧಾರ ಆಗಲಿದೆ. ದರ್ಶನ್ ಸೇರಿದಂತೆ 7 ಆರೋಪಿಗಳಿಗೆ 2024ರ ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದು ಮಾಡಬೇಕೆಂದು ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಪರವಾಗಿ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದ್ದಾರೆ. ಜುಲೈ 17ರಂದು ರಾಜ್ಯ ಸರ್ಕಾರದ ಪರ ವಾದ ಮುಕ್ತಾಯ ಆಗಿದೆ. ಮಂಗಳವಾರ ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ. ಒಂದು ವೇಳೆ ದರ್ಶನ್ ಜಾಮೀನು ರದ್ದಾದರೆ ಪ್ರಕರಣದ ಎಲ್ಲ ಆರೋಪಿಗಳಿಗೆ ಸಂಕಷ್ಟ ಶುರುವಾಗಲಿದೆ. ಈಗಾಗಲೇ ನ್ಯಾಯಾಲಯದ ಅನುಮತಿ ಪಡೆದು ದರ್ಶನ್ ವಿದೇಶಕ್ಕೆ ತೆರಳಿ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ.



















