ಭಾರತೀಯ ವನಿತೆಯರ ತಂಡ ಸದ್ಯ 2024ರ ಏಷ್ಯಾಕಪ್ ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಫೈನಲ್ ಪ್ರವೇಶಿಸಿದೆ. ಈ ಮಧ್ಯೆ ಭಾರತೀಯ ಆಟಗಾರ್ತಿ ಸ್ಮೃತಿ ಮಂಧಾನ ದಾಖಲೆಯೊಂದನ್ನು ಮಾಡಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ, ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 80 ರನ್ ಮಾತ್ರ ಗಳಿಸಿತ್ತು. ಸುಲಭ ಗುರಿ ಬೆನ್ನಟ್ಟಿದ್ದ ಭಾರತ ತಂಡ 10 ವಿಕೆಟ್ ಗಳಿಂದ ಜಯ ಸಾಧಿಸಿದೆ.
ತಂಡದ ಪರ ಶೆಫಾಲಿ (ಔಟಾಗದೆ 26, 28 ಎಸೆತ, 2 ಬೌಂಡರಿ) ಮತ್ತು ಮಂಧಾನ (ಔಟಾಗದೆ 55, 39 ಎಸೆತ, 9 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾರೆ. 11 ಓವರ್‌ಗಳಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೆ 83 ರನ್ ಗಳಿಸಿ ಭಾರತ ಗೆಲುವಿನ ನಗೆ ಬೀರಿತು.
ಈ ಪಂದ್ಯದಲ್ಲಿ ಅಜೇಯ 55 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಸ್ಮೃತಿ ಮಂಧಾನ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಹೆಸರಿನಲ್ಲಿತ್ತು. ಭಾರತ ಪರ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದರು. ಈಗ ಸ್ಮೃತಿ ಮಂಧಾನ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಂದಿದ್ದಾರೆ. ಸ್ಮೃತಿ ಮಂಧಾನ 140 ಪಂದ್ಯಗಳಿಂದ 3,433 ರನ್ ಕಲೆಹಾಕಿದ್ದರೆ, ಹರ್ಮನ್‌ಪ್ರೀತ್ ಕೌರ್ 172 ಪಂದ್ಯಗಳಲ್ಲಿ 3,415 ರನ್ ಗಳಿಸಿದ್ದಾರೆ.
ಅಲ್ಲದೇ, ಸ್ಮೃತಿ ಮಹಿಳಾ ಏಷ್ಯಾಕಪ್ ಟಿ20ಯಲ್ಲಿ 400 ರನ್ ಪೂರೈಸಿದ ಮೂರನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಹರ್ಮನ್‌ಪ್ರೀತ್ ಕೌರ್ (560) ಮತ್ತು ಮಿಥಾಲಿ ರಾಜ್ (430) ಅವರ ಕ್ಲಬ್ ಸೇರಿದ್ದಾರೆ.