ಮಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗನನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯು ಪತ್ನಿ, ಮಗನನ್ನು ಚೂರಿಯಿಂದ ಇರಿದು ನಂತರ ರೈಲಿಗೆ ತಲೆ ಕೊಟ್ಟಿದ್ದಾನೆ.
ಪತ್ನಿ ಪ್ರಿಯಾಂಕಾ(28), ಪುತ್ರ ಹೃದಯ್(4) ಕೊಲೆಯಾಗಿರುವ ದುರ್ದೈವಿಗಳು. ಆರೋಪಿ ಕಾರ್ತಿಕ್ ಭಟ್(32) ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೌಟುಂಬಿಕ ಕಲಹದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಾರ್ತಿಕ್ ಭಟ್, ಸಹಕಾರಿ ಬ್ಯಾಂಕ್ನಲ್ಲಿ ಉದ್ಯೋಗ ಮಾಡಿಕೊಂಡಿದ್ದ. ಸೊಸೆ ಮತ್ತು ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ವೃದ್ಧ ಅತ್ತೆ ಮಾವನಿಗೆ ಗೊತ್ತೆ ಆಗಿಲ್ಲ ಎನ್ನಲಾಗಿದೆ. ಕಾರ್ತಿಕ್ ಪತ್ನಿಗೆ ತನ್ನ ಮಾವ ಅತ್ತೆಯೊಂದಿಗೆ ಮನಸ್ತಾಪವಿತ್ತು ಎನ್ನಲಾಗಿದೆ.
ಕಾರ್ತಿಕ್ ತಂದೆ ಜನಾರ್ದನ ಭಟ್ ಪಕ್ಷಿಕೆರೆ ಜಂಕ್ಷನ್ಲ್ಲಿ ಹೋಟೆಲ್ ನಡೆಸುತ್ತಿದ್ದರು. ಅವರು ಹೋಟೆಲ್ ಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.