ವಯನಾಡು ದುರಂತದಲ್ಲಿ ಕಾಂಗ್ರೆಸ್ ನಾಯಕಿಯೊಬ್ಬರು ತಮ್ಮ ಕುಟುಂಬಸ್ಥರನ್ನೆಲ್ಲ ಕಳೆದುಕೊಂಡು ಏಕಾಂಗಿಯಾಗಿ ಗೋಳಾಡುತ್ತಿದ್ದಾರೆ. ಈ ವಿಷಯ ಸಂಸತ್ ನಲ್ಲೂ ಪ್ರತಿಧ್ವನಿಸಿ, ಎಲ್ಲರನ್ನೂ ಭಾವುಕರನ್ನಾಗಿ ಮಾಡಿದೆ.
ವಯನಾಡು ದುರಂತಕ್ಕೆ ಬಲಿಯಾದವರ ಸಂಖ್ಯೆ 350ರ ಗಡಿ ದಾಟಿದೆ. 200ಕ್ಕೂ ಅಧಿಕ ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಗಾಯಳುಗಳ ಸಂಖ್ಯೆಯೂ ಹೆಚ್ಚಿದೆ. ಬದುಕುಳಿದವರ ಕಣ್ಣೀರ ಕತೆ ಇಡೀ ದೇಶವೇ ಮರುಗುವಂತೆ ಮಾಡುತ್ತಿದೆ. ಎಲ್ಲರನ್ನು ಕಳೆದುಕೊಂಡು ಏಕಾಂಗಿಯಾದವರ ಸಂಖ್ಯೆ ಹೆಚ್ಚಿದೆ. ಹೀಗೆ ಕುಟುಂಬಸ್ಥರನ್ನೆಲ್ಲ ಕಳೆದುಕೊಂಡು ವಯನಾಡು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೋಭನಾ ಸೋಮನಾಥ್ ಕಣ್ಣೀರು ಸುರಿಸಿದ್ದಾರೆ. ಈ ಕತೆ ರಾಜ್ಯಸಭೆಯಲ್ಲಿಯೂ ಮನ ಕಲುಕಿದೆ.
ದುರಂತದ ರಾತ್ರಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೋಭನಾ ಸೋಮನಾಥ್ ಅವರ ಮನೆ ಕೊಚ್ಚಿ ಹೋಗಿದೆ. ಈ ಮನೆಯಲ್ಲಿ ಶೋಭನಾ ಸೋಮನಾಥ್ ತಾಯಿ, ಸಹೋದರ ಸುದೇವ್, ಅವರ ಪತ್ನಿ ಹಾಗೂ ಸಹೋದರನ ಇಬ್ಬರು ಮಕ್ಕಳು ಭೂಕುಸಿತ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಒಂದೇ ಕುಟುಂಬದ ಐವರನ್ನು ಕಳೆದುಕೊಂಡ ಶೋಭನಾ ಈಗ ಏಕಾಂಗಿಯಾಗಿ ಗೋಳಾಡುತ್ತಿದ್ದಾರೆ.
ಶೋಭನಾ ಅವರ ದುರಂತ ಕತೆಯನ್ನು ರಾಜ್ಯಸಭಾ ಸದಸ್ಯೆ, ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜೆಬಿ ಮಾಥೆರ್ ವಿವರಿಸಿದ್ದಾರೆ. ರಾಜ್ಯಸಭೆಗೂ ಆಗಮಿಸುವ ಮುನ್ನ ಶೋಭನಾ ಸೋಮನಾಥ್ ಜೊತೆ ಮಾತನಾಡಿದ್ದೆ. ಅವರ ಕುಟುಂಬದ ಐವರು ವಯನಾಡು ದುರಂತದಲ್ಲಿ ಕೊಚ್ಚಿ ಹೋಗಿದ್ದಾರೆ. ಎಲ್ಲಿ ನೋಡಿದರು ಕಣ್ಣೀರು, ಆರ್ತನಾದವೇ ಕೇಳಿಸುತ್ತಿದೆ ಎಂದು ಭಾವುಕರಾಗಿ ಹೇಳಿದ್ದಾರೆ.
ವಯನಾಡು ದುರಂತದಲ್ಲಿ ಆಪ್ತರನ್ನು ಕಳೆದುಕೊಂಡು, ಮನೆ ಕಳೆದುಕೊಂಡು ಗೋಳಾಡುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ.