ನವದೆಹಲಿ: ಕಳೆದ ಮೂರು ತಿಂಗಳಲ್ಲಿ ಟರ್ಕಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.50ರಷ್ಟು ಕುಸಿತ ಕಂಡುಬಂದಿದೆ. ಆಪರೇಷನ್ ಸಿಂದೂರದ ಸಮಯದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಸೇನಾ ನೆರವು ಮತ್ತು ರಾಜತಾಂತ್ರಿಕ ಬೆಂಬಲ ನೀಡುತ್ತಿರುವುದು ಬಹಿರಂಗಗೊಂಡ ನಂತರದಲ್ಲಿ ಈ ಬೆಳವಣಿಗೆ ನಡೆದಿದೆ.
ಟರ್ಕಿ ಪ್ರವಾಸೋದ್ಯಮದ ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮೇ ತಿಂಗಳಿನಲ್ಲಿ 31,659 ಭಾರತೀಯರು ಟರ್ಕಿಗೆ ಭೇಟಿ ನೀಡಿದ್ದರೆ, ಜುಲೈ ವೇಳೆಗೆ ಈ ಸಂಖ್ಯೆ 16,244ಕ್ಕೆ ಇಳಿದಿದೆ. ಇದು ಸುಮಾರು ಶೇ.50ರಷ್ಟು ಕುಸಿತವನ್ನು ತೋರಿಸುತ್ತದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ 28,875 ಭಾರತೀಯರು ಟರ್ಕಿಗೆ ಭೇಟಿ ನೀಡಿದ್ದರು, ಅದಕ್ಕೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇ. 44ರಷ್ಟು ಇಳಿಕೆಯಾಗಿದೆ.

ಕುಸಿತಕ್ಕೆ ಕಾರಣವೇನು?
“ಆಪರೇಷನ್ ಸಿಂದೂರ” ಸಂದರ್ಭದಲ್ಲಿ ಭಾರತದ ವಿರುದ್ಧ ಪಾಕಿಸ್ತಾನವು ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿತ್ತು. ಅಂದಿನಿಂದ, ಟರ್ಕಿಯು ಪಾಕಿಸ್ತಾನದ ಪರವಾಗಿ ಬಹಿರಂಗವಾಗಿ ರಾಜತಾಂತ್ರಿಕ ನಿಲುವು ತಳೆದಿರುವುದು ಸ್ಪಷ್ಟವಾಗಿತ್ತು. ಇದರ ಪರಿಣಾಮವಾಗಿ ಭಾರತದಲ್ಲಿ “ಬಾಯ್ಕಾಟ್ ಟರ್ಕಿ” (ಟರ್ಕಿ ಬಹಿಷ್ಕರಿಸಿ) ಅಭಿಯಾನ ಪ್ರಾರಂಭವಾಯಿತು. ಭಾರತೀಯರು ಟರ್ಕಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದರು.
ಈ ಅಭಿಯಾನವು ಪ್ರವಾಸೋದ್ಯಮದ ಮೇಲೆ ನೇರ ಪರಿಣಾಮ ಬೀರಿದೆ. ಮೇ ತಿಂಗಳಿನಲ್ಲಿದ್ದ 31,659 ಪ್ರವಾಸಿಗರ ಸಂಖ್ಯೆ, ಜೂನ್ ತಿಂಗಳಲ್ಲಿ 24,250ಕ್ಕೆ ಮತ್ತು ಜುಲೈನಲ್ಲಿ 16,244ಕ್ಕೆ ಇಳಿದಿದೆ. ಸಾಮಾನ್ಯವಾಗಿ ಈ ಮೂರು ತಿಂಗಳು ಭಾರತೀಯರಿಗೆ ಪ್ರವಾಸಕ್ಕೆ ಪ್ರಶಸ್ತ ಸಮಯವಾಗಿದೆ.
ಭಾರತದ ಸ್ಪಷ್ಟ ಸಂದೇಶ
ಟರ್ಕಿಯ ನಿಲುವಿಗೆ ಪ್ರತಿಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸೈಪ್ರಸ್‌ಗೆ ಭೇಟಿ ನೀಡಿ, ಟರ್ಕಿಯ ಆಕ್ರಮಣದಲ್ಲಿರುವ ಉತ್ತರ ಸೈಪ್ರಸ್‌ನ ಗಡಿಭಾಗದಲ್ಲಿ ಸಂಚರಿಸಿ ಸ್ಪಷ್ಟ ಸಂದೇಶ ರವಾನಿಸಿದ್ದರು. ಅಲ್ಲದೆ, ‘ಆಪರೇಷನ್ ಸಿಂದೂರ’ ವೇಳೆ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ ಕೇವಲ ಮೂರು ದೇಶಗಳು (ಟರ್ಕಿ, ಚೀನಾ, ಅಜೆರ್ಬೈಜಾನ್) ಪಾಕಿಸ್ತಾನವನ್ನು ಬೆಂಬಲಿಸಿದ್ದವು ಎಂದು ಸಂಸತ್ತಿನಲ್ಲಿ ತಿಳಿಸಿದ್ದರು.
ಈ ಬೆಳವಣಿಗೆಯ ನಂತರ, ಭಾರತದ ಪ್ರಮುಖ ಟ್ರಾವೆಲ್ ಪೋರ್ಟಲ್ ಗಳಾದ ಮೇಕ್ ಮೈ ಟ್ರಿಪ್ (MakeMyTrip), ಈಸ್ ಮೈ ಟ್ರಿಪ್ (EaseMyTrip), ಮತ್ತು ಕ್ಲಿಯರ್ ಟ್ರಿಪ್ (Cleartrip) ಟರ್ಕಿಯ ಪ್ರವಾಸ ಪ್ಯಾಕೇಜ್ ಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಘೋಷಿಸಿದ್ದವು.
ಈಸ್ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ, “ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವ ದೇಶಗಳ ಜೊತೆ ಭಾರತೀಯರು ಕೈಜೋಡಿಸುವುದಿಲ್ಲ. ಈ ಕುಸಿತವು ವಿದೇಶಿ ಪ್ರವಾಸೋದ್ಯಮ ಮಂಡಳಿಗಳಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ” ಎಂದು ಹೇಳಿದ್ದರು.



















