ಮೈಸೂರು: ಚಾಮುಂಡಿಬೆಟ್ಟ ಅರಣ್ಯ ಪ್ರದೇಶಕ್ಕೆ ಹೊತ್ತಿಕೊಂಡ ಬೆಂಕಿ 8 ಗಂಟೆಗಳ ಕಾಲ ಧಗಧಗಿಸಿದೆ. ಇಂದು ಬೆಳಗ್ಗೆ ಮಂಜಿನಿಂದಾಗಿ ಹತೋಟಿಗೆ ಬಂದಿದೆ ಎನ್ನಲಾಗಿದೆ.
ನಿನ್ನೆಯಿಂದ ಧಗಧಗಿಸುತ್ತಿದ್ದ ಬೆಂಕಿ ಮಂಜಿನಿಂದಾಗಿ ತಣ್ಣಗಾಗಿದೆ ಎನ್ನಲಾಗಿದೆ. ನಿನ್ನೆ ಕಾಣಿಸಿಕೊಂಡ ಬೆಂಕಿ ಬಿಸಿಲ ಧಗೆ ಹಾಗೂ ಭಾರೀ ಗಾಳಿಯಿಂದ 35 ಎಕರೆಗೂ ಅಧಿಕ ಪ್ರದೇಶಕ್ಕೆ ವ್ಯಾಪಿಸಿ, ಕುರುಚಲು ಗಿಡಗಳು ಸುಟ್ಟು ಹೋಗಿದ್ದವು. ಉತ್ತನಹಳ್ಳಿ ಮತ್ತು ಲಲಿತಾದ್ರಿಪುರ ಬಳಿ ಮೂರು ಕಡೆ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಸುಮಾರು 30 ಎಕರೆ ಪ್ರದೇಶದಷ್ಟು ಬೆಂಕಿ ವ್ಯಾಪಿಸಿತ್ತು ಎನ್ನಲಾಗಿದೆ. ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸಂಜೆ ವೇಳೆಗೆ ಬೆಂಕಿ ನಿಯಂತ್ರಿಸಿದ್ದರು. ಆದರೆ, ಬೆಳಗಿನ ಮುಂಜಾವಿಗೆ ಬೆಂಕಿ ಸಂಪೂರ್ಣವಾಗಿ ಹತೋಟಿಗೆ ಬಂದಿದೆ.
ಶುಕ್ರವಾರ ಮಧ್ಯಾಹ್ನ ದುಷ್ಕರ್ಮಿಗಳು ಉತ್ತನಹಳ್ಳಿ ದೇವಾಲಯಕ್ಕೆ ಹೋಗುವ ರಸ್ತೆ ಬಳಿ ಸೇರಿದಂತೆ ಮೂರು ಕಡೆ ಬೆಂಕಿ ಹೊತ್ತಿಸಿದ್ದಾರೆ. ಅದು ಬಿಸಿಲಿನ ತಾಪಕ್ಕೆ ಒಣಗಿದ್ದ ಬೆಟ್ಟದ ತಪ್ಪಲಿನ ಕುರುಚಲು ಹುಲ್ಲು, ಗಿಡಗಂಟಿಗಳಿಗೆ ಬೆಂಕಿ ವ್ಯಾಪಿಸಿದೆ. ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ವಿಶೇಷ ತಂಡ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಜಂಟಿ ಸಹಯೋಗದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದವು.
ಬೆಂಕಿ ನಿಯಂತ್ರಣ ಕಾರ್ಯ ಯಶಸ್ವಿಯಾಗಿದೆ. ರಾತ್ರಿ ಕೂಡ ನಿಗಾವಹಿಸಲಾಗುವುದು. ಈ ಬಾರಿ ಬೇಸಿಗೆ ಹೆಚ್ಚು ತೀವ್ರವಾಗಿದೆ. ಹೀಗಾಗಿ ಸಾರ್ವಜನಿಕರು ಬೆಟ್ಟದ ವ್ಯಾಪ್ತಿಯಲ್ಲಿ ಧೂಮಪಾನ ಸೇರಿದಂತೆ ಬೆಂಕಿಯ ಚಟುವಟಿಕೆಯನ್ನು ಮಾಡಬಾರದು ಎಂದು ಡಿಸಿಎಫ್ ಕೆ.ಎನ್. ಬಸವರಾಜು ಮನವಿ ಮಾಡಿದ್ದಾರೆ.