ಧಾರವಾಡ: ಪಾಪಿ ಮಗನೇ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಡಿವೆಪ್ಪ ತಡಕೋಡ (57) ಕೊಲೆಯಾಗಿರುವ ದುರ್ದೈವಿ. ಜಿಲ್ಲೆಯ ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ಪಕ್ಕದಲ್ಲಿ ಮಲಗಿದ್ದ ತಂದೆಯ ಮೇಲೆ ಮಗನೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಅಡಿವೆಪ್ಪ ಕೊಲೆಯಾಗಿದ್ದನ್ನು ಕಂಡು ಆತನ ಮನೆಯವರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಘಟನೆ ನಡೆದ ಮೇಲೆ ಕೊಲೆಯಾಗಿರುವ ಅಡಿವೆಪ್ಪ ಅವರ ಮಗ ಶಿವಯೋಗಿ ಮಾತ್ರ ತನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸಿದ್ದ. ಇದು ಪೊಲೀಸರ ಸಂಶಯಕ್ಕೆ ಕಾರಣವಾಗಿತ್ತು.
ಆರೋಪಿ ಶಿವಯೋಗಿ ಅದೇ ಗ್ರಾಮದಲ್ಲಿ ಅಕ್ರಮ ಸಂಬಂಧ ಹೊಂದಿದ್ದ. ಇದಕ್ಕೆ ತಂದೆ ಅಡಿವೆಪ್ಪ ವಿರೋಧ ವ್ಯಕ್ತಪಡಿಸಿದ್ದ. ಮಗನ ಜೀವನ ಚೆನ್ನಾಗಿರಲಿ ಎಂದು ಕನ್ಯೆ ನೋಡಲು ಆರಂಭಿಸಿದ್ದರು. ಆದರೆ, ಇದಕ್ಕೆ ಶಿವಯೋಗಿ ಒಪ್ಪಿಗೆ ನೀಡಿರಲಿಲ್ಲ. ಈ ವಿಷಯವಾಗಿ ಮನೆಯಲ್ಲಿ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಶಿವಯೋಗಿ ತಂದೆಯನ್ನೇ ಹತ್ಯೆ ಮಾಡಿದ್ದಾನೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.