ಚಂಡೀಗಢ: ವಿರಾಟ್ ಕೊಹ್ಲಿ(Virat Kohli) ಕ್ರೀಡಾ ಕ್ಷೇತ್ರದ ಸ್ಟಾರ್. ಅವರ ಅಭಿಮಾನಿಗಳಿಗೆ ಗಡಿಯ ಮಿತಿ ಇಲ್ಲ. ಪಾಕಿಸ್ತಾನದಲ್ಲಿಯೂ ವಿರಾಟ್ ಕೊಹ್ಲಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರನ್ನು ಭೇಟಿಯಾಗಲೆಂದು ಶಬರಿಯಂತೆ ಕಾದು ಕುಳಿತಿವರು ಇನ್ನೂ ಇದ್ದಾರೆ. ಇಲ್ಲೊಬ್ಬ ಅಭಿಮಾನಿ ಕೊಹ್ಲಿಯನ್ನು ಭೇಟಿ ಮಾಡಿ ಆಟೋಗ್ರಾಫ್ ಪಡೆಯಲು ಕೊಹ್ಲಿಯ ಮನೆಯ ಮುಂದೆ ರಾತ್ರಿಯಿಡಿ ಕಾದು ಕುಳಿತ ಪ್ರಸಂಗ ನಡೆದಿದೆ.
ತನ್ನ ಆರಾಧ್ಯ ದೈವವನ್ನು ಒಮ್ಮೆಯಾದರೂ ಭೇಟಿ ಮಾಡಬೇಕೆಂಬ ಪಣ ತೊಟ್ಟ ಅಭಿಮಾನಿ ಗುರುಗ್ರಾಮ್‌ನಲ್ಲಿರುವ ವಿರಾಟ್ ಕೊಹ್ಲಿಯ ಮನೆಯ ಹೊರಗೆ ರಾತ್ರಿಯಿಡೀ ಸುಮಾರು ಗಂಟೆಗಟ್ಟಲೆ ಕಾದು ಕುಳಿತಿದ್ದ. ಅಭಿಮಾನಿ ಮನೆಯ ಮುಂದೆ ಕಾಯುತ್ತಿದ್ದ ವಿಚಾರ ತಿಳಿದ ಕೊಹ್ಲಿ, ಆತನನ್ನು ಮನೆಯ ಒಳಗೆ ಕರೆಸಿಕೊಂಡು ಆತಿಥ್ಯ ಹಾಗೂ ಆಟೋಗ್ರಾಫ್ ನೀಡಿ ಕಳುಹಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್
ಕಟ್ಟರ್ ಅಭಿಮಾನಿ ಕೊಹ್ಲಿಯನ್ನು ಭೇಟಿಯಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಹ್ಲಿಯ ಈ ನಡೆಗೆ ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಕೊಹ್ಲಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲು ಕಾನ್ಪುರದಲ್ಲಿ ತಂಡದ ಸಹ ಆಟಗಾರರೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೊಹ್ಲಿ 13 ವರ್ಷಗಳ ಬಳಿಕ ರಣಜಿ ಪಂದ್ಯ ಆಡಿದ್ದರು. ಈ ವೇಳೆ ಕೊಹ್ಲಿಯ ಆಟ ವೀಕ್ಷಿಸಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ಸ್ಟೇಡಿಯಂಗೆ ಹರಿದು ಬಂದಿದ್ದನ್ನು ಸ್ಮರಿಸಬಹುದು. ಸ್ಟೇಡಿಯಮ್ ಗೇಟ್ ಬಳಿ ನೂಕು ನುಗ್ಗಲು ಉಂಟಾಗಿ ಹಲವರಿಗೆ ಗಾಯಗಳು ಉಂಟಾಗಿತ್ತು.
ಆರ್‌ಸಿಬಿಗೆ ನಾಯಕ?
ಮಾರ್ಚ್‌ನಲ್ಲಿ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಮತ್ತೆ ಆರ್ಸಿಬಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದು ಆರ್ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಕೌತುಕ ಹಾಗೂ ರೋಮಾಂಚಕಾರಿ ವಿಷಯ. ಕೊಹ್ಲಿ ಸಂದರ್ಶನವೊಂದರಲ್ಲಿ ಮುಂದಿನ ಮೂರು ವರ್ಷದ ಒಳಗೆ ಆರ್‌ಸಿಬಿಗೆ ಕನಿಷ್ಠ ಒಂದು ಕಪ್ ಗೆಲ್ಲಲಿದೆ ಎಂದಿದ್ದಾರೆ.