ಕಲಬುರಗಿ: ಇಟ್ಟಿಗೆ ಬಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ -ಪತ್ನಿ ಬೆಳಿಗ್ಗೆಯೆಲ್ಲ ಕೆಲಸ ಮಾಡಿ, ರಾತ್ರಿ ಎಣ್ಣೆ ಹೊಡೆದು ನಶೆಯಲ್ಲಿ ಜಗಳ ಮಾಡಿಕೊಂಡಿದ್ದಾರೆ. ಆದರೆ, ಈ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ನಗರ ಹೊರವಲಯದ ಶಹಬಾದ್ ರಸ್ತೆಯ ಇಟ್ಟಿಗೆ ಭಟ್ಟಿಯಲ್ಲಿ ಈ ಘಟನೆ ನಡೆದಿದೆ. ಕುಡಿದ ನಶೆಯಲ್ಲಿ ಗಂಡ – ಹೆಂಡತಿ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ನಶೆಯಲ್ಲಿ ಪತಿಯು ಪತ್ನಿಯನ್ನು ಕೊಲೆ ಮಾಡಿದ್ದಾನೆ. ಆಳಂದ ತಾಲೂಕಿನ ಕೊಡಲಹಂಗರಗಾ ಗ್ರಾಮದ ಪ್ರಿಯಾಂಕಾ (35) ಕೊಲೆಯಾಗಿರುವ ಪತ್ನಿ. ನಿಂಬರ್ಗಾ ಗ್ರಾಮದ ವಕೀಲ್ ರಾಠೋಡ್ ಕೊಲೆ ಮಾಡಿದ ಪತಿ.
ಈ ದಂಪತಿ ಮಕ್ಕಳೊಂದಿಗೆ ಶಹಬಾದ್ ರಸ್ತೆಯಲ್ಲಿನ ಇಟ್ಟಿಗೆ ಭಟ್ಟಿ ಬಳಿ ಮನೆ ಮಾಡಿಕೊಂಡು ಅಲ್ಲೇ ಕೆಲಸ ಮಾಡುತ್ತಿದ್ದರು. ಆದರೆ, ಈ ದಂಪತಿ ಪ್ರತಿ ದಿನ ಕಂಠಪೂರ್ತಿ ಕುಡಿಯುತ್ತಿದ್ದರು. ಕಳೆದ ರಾತ್ರಿ ಸಹ ಇಬ್ಬರು ಮದ್ಯ ಸೇವಿಸಿದ್ದಾರೆ. ಆದರೆ, ಇಬ್ಬರ ಮಧ್ಯೆ ಜಗಳ ನಡೆದಿದೆ. ಆಗ ಕುಡಿದ ನಶೆಯಲ್ಲಿ ಪತಿಯು ಪತ್ನಿಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ. ಪರಿಣಾಮ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಬ್ಬರಿಗೂ ಮದ್ಯದ ಚಟ ಇರುವ ಹಿನ್ನೆಲೆಯಲ್ಲಿ ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದರು. ಹೀಗಾಗಿ ತಮ್ಮ ಮಕ್ಕಳನ್ನು ಅಜ್ಜ-ಅಜ್ಜಿಯ ಮನೆಗೆ ಬಿಟ್ಟು ಬಂದಿದ್ದರು. ಇವರು ಜಗಳ ಮಾಡುತ್ತಿರುವುದನ್ನು ಗಮನಿಸಿದ ಅಕ್ಕ-ಪಕ್ಕದವರು ಕೂಡ ಇದು ಪ್ರತಿದಿನದ ಸಂತೆ ಎಂದು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ಇವರ ಜಗಳ ಮಾತ್ರ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಈಗ ಮಕ್ಕಳು ಅನಾಥರಾಗುವಂತಾಗಿದೆ.