ಮುಂಬೈ: ಮಹಾರಾಷ್ಟ್ರದ ಹಲವು ನಗರಗಳಲ್ಲಿ ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟ ನಿಷೇಧಿಸಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಹಠಾತ್ ಆಗಿ ಹೇರಲಾಗುವ ಮಾಂಸ ನಿಷೇಧದಿಂದ ಉಂಟಾಗುವ ವಿವಾದಗಳು ಮತ್ತು ಆರ್ಥಿಕ ನಷ್ಟವನ್ನು ತಪ್ಪಿಸಲು “ರಾಷ್ಟ್ರೀಯ ಮಾಂಸ ಮಾರಾಟ ಕ್ಯಾಲೆಂಡರ್” ಜಾರಿಗೆ ತರಬೇಕೆಂದು ಭಾರತೀಯ ಕೋಳಿ ಸಾಗಣೆ ಒಕ್ಕೂಟ (PFI) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಮಹಾರಾಷ್ಟ್ರದ ನಾಗ್ಪುರ, ನಾಸಿಕ್, ಮಾಲೆಗಾಂವ್, ಛತ್ರಪತಿ ಸಂಭಾಜಿನಗರ ಮತ್ತು ಕಲ್ಯಾಣ್-ಡೊಂಬಿವ್ಲಿ ಸೇರಿದಂತೆ ಕನಿಷ್ಠ ಐದು ಮಹಾನಗರ ಪಾಲಿಕೆಗಳು ಆಗಸ್ಟ್ 15ರಂದು ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿನೆ. ಈ ನಿರ್ಧಾರವು ಆಡಳಿತಾರೂಢ ಮೈತ್ರಿಕೂಟದಲ್ಲಿಯೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಆಡಳಿತ ಪಕ್ಷದ ಭಾಗವಾಗಿರುವ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ವಿರೋಧ ಪಕ್ಷಗಳು ಈ ಕ್ರಮವನ್ನು ಖಂಡಿಸಿವೆ.
ಆದಾಗ್ಯೂ, 1988ರಲ್ಲೇ ರಾಜ್ಯ ಸರ್ಕಾರವು ಇಂತಹ ನಿರ್ಬಂಧಗಳನ್ನು ವಿಧಿಸಲು ನಗರ ಪಾಲಿಕೆಗಳಿಗೆ ಅಧಿಕಾರ ನೀಡಿತ್ತು ಎಂದು ಬಿಜೆಪಿ ಈ ಕ್ರಮವನ್ನು ಸಮರ್ಥಿಸಿಕೊಂಡಿದೆ. ಆಗ ಶರದ್ ಪವಾರ್ ಮುಖ್ಯಮಂತ್ರಿಯಾಗಿದ್ದಾಗ ಈ ನೀತಿಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು ಎಂದು ಬಿಜೆಪಿ ನೆನಪಿಸಿದೆ.
ರಾಜಕೀಯ ನಾಯಕರ ಪ್ರತಿಕ್ರಿಯೆ
ಈ ನಿಷೇಧದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಅಜಿತ್ ಪವಾರ್, “ಇಂತಹ ನಿಷೇಧ ಹೇರುವುದು ತಪ್ಪು. ಪ್ರಮುಖ ನಗರಗಳಲ್ಲಿ ವಿವಿಧ ಜಾತಿ-ಧರ್ಮದ ಜನರು ವಾಸಿಸುತ್ತಾರೆ. ಭಾವನಾತ್ಮಕ ವಿಷಯವಾದರೆ ಒಂದು ದಿನ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದಂತಹ ದಿನಗಳಲ್ಲಿ ಇಂತಹ ಆದೇಶಗಳನ್ನು ಹೇರಿದರೆ ಕಷ್ಟವಾಗುತ್ತದೆ” ಎಂದು ಹೇಳಿದ್ದಾರೆ.
ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ, “ಸ್ವಾತಂತ್ರ್ಯ ದಿನದಂದು ನಾವು ಏನು ತಿನ್ನಬೇಕು, ತಿನ್ನಬಾರದು ಎಂದು ನಿರ್ಧರಿಸುವುದು ನಮ್ಮ ಆಯ್ಕೆ. ಇದರಲ್ಲಿ ಹಸ್ತಕ್ಷೇಪ ಮಾಡಲು ಪಾಲಿಕೆ ಆಯುಕ್ತರಿಗೆ ಯಾವುದೇ ಹಕ್ಕಿಲ್ಲ. ನಾವು ಖಂಡಿತವಾಗಿಯೂ ಮಾಂಸಾಹಾರ ಸೇವಿಸುತ್ತೇವೆ” ಎಂದು ಪ್ರತಿಭಟನಾತ್ಮಕವಾಗಿ ಹೇಳಿದ್ದಾರೆ.
ಪೌಲ್ಟ್ರಿ ಫೆಡರೇಷನ್ ಬೇಡಿಕೆಗಳೇನು?
ಈ ವಿವಾದದ ನಡುವೆ, ಪೌಲ್ಟ್ರಿ ಫೆಡರೇಶನ್ ಆಫ್ ಇಂಡಿಯಾ (PFI) ಕೇಂದ್ರ ಸಚಿವ ಎಸ್.ಪಿ. ಸಿಂಗ್ ಬಘೇಲ್ ಅವರಿಗೆ ಪತ್ರ ಬರೆದಿದೆ. ಮದ್ಯ ಮಾರಾಟಕ್ಕೆ “ಡ್ರೈ ಡೇ” ಕ್ಯಾಲೆಂಡರ್ ಇರುವಂತೆಯೇ ಮಾಂಸ ಮಾರಾಟಕ್ಕೂ ರಾಷ್ಟ್ರೀಯ ಕ್ಯಾಲೆಂಡರ್ ರೂಪಿಸಬೇಕು ಎಂದು ಆಗ್ರಹಿಸಿದೆ. ಇದರಿಂದ ಹಠಾತ್ ನಿಷೇಧಗಳಿಂದಾಗುವ ಆರ್ಥಿಕ ನಷ್ಟವನ್ನು ತಡೆಯಬಹುದು ಎಂದು ಒಕ್ಕೂಟ ಹೇಳಿದೆ.
ಒಕ್ಕೂಟದ ಅಧ್ಯಕ್ಷ ರಣಪಾಲ್ ಧಂಡಾ ಅವರು ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
- ಮಾಂಸದ ಅಂಗಡಿಗಳನ್ನು ಮುಚ್ಚುವ ಬಗ್ಗೆ ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಮಾಹಿತಿ ನೀಡಬೇಕು.
- ನಿಷೇಧದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿಯಲ್ಲಿ ಒಕ್ಕೂಟದ ಪ್ರತಿನಿಧಿಯೊಬ್ಬರನ್ನು ಸೇರಿಸಿಕೊಳ್ಳಬೇಕು.
- ಶ್ರಾವಣ ಮಾಸದಲ್ಲಿ ಕೇವಲ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಮಾರಾಟ ನಿಷೇಧವನ್ನು ವಿಧಿಸಬೇಕು.
-ಹಠಾತ್ ನಿಷೇಧಗಳಿಂದಾಗಿ ದಿನಗೂಲಿ ಕಾರ್ಮಿಕರಿಂದ ಹಿಡಿದು ಉದ್ಯಮಿಗಳವರೆಗೆ ಮಾಂಸ ಉದ್ಯಮವನ್ನು ಅವಲಂಬಿಸಿರುವ ಲಕ್ಷಾಂತರ ಜನರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ಒಕ್ಕೂಟವು ತನ್ನ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ.
ಸಾಂಪ್ರದಾಯಿಕವಾಗಿ, ರಾಮ ನವಮಿ, ಮಹಾ ಶಿವರಾತ್ರಿ, ಗಾಂಧಿ ಜಯಂತಿ ಮತ್ತು ವಾಲ್ಮೀಕಿ ಜಯಂತಿಯಂತಹ ಹಬ್ಬಗಳಂದು ಹಲವು ನಗರಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗುತ್ತದೆ. ಈ ವಿವಾದ ಮಹಾರಾಷ್ಟ್ರಕ್ಕೆ ಸೀಮಿತವಾಗಿಲ್ಲ; ಹೈದರಾಬಾದ್‌ನಲ್ಲಿಯೂ ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟ ನಿಷೇಧಿಸಲಾಗಿತ್ತು. ಇದಲ್ಲದೆ, ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್ 16ರಂದು ಬೆಂಗಳೂರಿನಲ್ಲೂ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.



















