ಹುಬ್ಬಳ್ಳಿ: ಹುಡುಗಿ ವಿಚಾರವಾಗಿ ಜೈಲಿಗೆ ಹೋದ್ರೂ ಬುದ್ಧಿ ಕಲಿಯದ ಪಾಗಲ್ ಪ್ರೇಮಿ, ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿ ಅಪ್ರಾಪ್ತೆಗೆ ಮಾನಸಿಕ ಹಿಂಸೆ ಕೊಟ್ಟಿದ್ದು ಬೆಳಕಿಗೆ ಬಂದಿದೆ.
ಮುಸ್ಲಿಂ ಯುವಕನಿಂದ ಹಿಂದೂ ಅಪ್ರಾಪ್ತೆ ಮೇಲೆ ಲವ್ ಜಿಹಾದ್ ಆರೋಪದ ಹಿನ್ನಲೆ ಜೈಲು ಸೇರಿದ್ದ ಭೂಪ ಹುಬ್ಬಳ್ಳಿಯ ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದಲೇ ಹುಡುಗಿಗೆ ಕರೆ ಮಾಡಿದ್ದಾನೆ. ಪಾಕ್ಸೋ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿಯು ಜೈಲಿನಿಂದಲೇ ಸ್ಮಾರ್ಟ್‌ಫೋನ್ ಬಳಸಿ ವೀಡಿಯೋ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ವೀಡಿಯೋದಲ್ಲಿ ಆತ ತನ್ನ ಪರವಾಗಿ ನ್ಯಾಯಾಲಯದಲ್ಲಿ ಮಾತನಾಡುವಂತೆ ಒತ್ತಾಯಿಸುವ, ಅಶ್ಲೀಲ ವಿಡಿಯೋ ವೈರಲ್ ಮಾಡುವ ಭಯಕ್ಕೆ ಒಳಪಡಿಸುವ, ಮತ್ತು ಕಾಲ್‌ನಲ್ಲಿ ನಿತ್ಯ ಸುಳ್ಳು ಬೆದರಿಕೆ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆರೋಪಿಯು ಕಾಲ್ ಮಾಡಿ ಕೈಯಲ್ಲಿ ಸಂತ್ರಸ್ತೆಯ ಹೆಸರು ಬರೆದುಕೊಂಡು ತೋರಿಸುತ್ತಿದ್ದು, ಮಾತನಾಡದಿದ್ದರೆ ಜೀವ ಬೆದರಿಕೆ ಹಾಕಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ವಾರ ಶ್ರೀರಾಮಸೇನೆ ಧಾರವಾಡ ಜೈಲಿನ ಮುಂದೆ ಪ್ರತಿಭಟನೆ ನಡೆಸಿತ್ತು. ಸಂಘಟನೆಯು ಜೈಲು ಅಧಿಕಾರಿಗಳ ದೌರ್ಜನ್ಯ ಮತ್ತು ಕೈದಿಗಳ ಬಳಿ ಮೊಬೈಲ್‌ಗಳನ್ನು ಬಳಸಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಸಂಬಂಧಿತ ಅಧಿಕಾರಿಗಳು ಆರೋಪಿಯನ್ನು ಧಾರವಾಡದಿಂದ ಬೆಳಗಾವಿ ಜೈಲಿಗೆ ಸ್ಥಳಾಂತರಿಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ. ಪ್ರಕರಣವು ಜೈಲು ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ : ಒಣಗಿದ ದಾಸವಾಳ ಹೂವು ನುಂಗಿ ಉಸಿರು ಚೆಲ್ಲಿದ 6 ತಿಂಗಳ ಕಂದಮ್ಮ!


















