ಮದುವೆ ಎಂದರೆ, ಎಲ್ಲರಿಗೂ ಸಂಭ್ರಮ. ಮದುವೆ ಹಲವರ ಕನಸಾಗಿರುತ್ತದೆ. ಹೀಗಾಗಿ ಮದುವೆ ದಿನವನ್ನು ಜೀವನ ಪರ್ಯಂತ ಸ್ಮರಣೀಯವಾಗಿಸಲು ಹಲವರು ಹಲವು ರೀತಿ ಪ್ರಯತ್ನಿಸುತ್ತಿರುತ್ತಾರೆ. ಹೀಗಾಗಿ ಮದುವೆ ಸಂಭ್ರಮ ಭಿನ್ನ ವಿಭಿನ್ನವಾಗಿರುತ್ತವೆ. ಒಂದು ಹೆಜ್ಜೆ ಮುಂದು ಹೋಗಿರುವ ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ ಆಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ಈ ಫೋಟೋ ಈಗ ವೈರಲ್ ಆಗುತ್ತಿದೆ. ಸೌದಿ ಅರೇಬಿಯಾದ ಹಸನ್ ಅಬು ಅಲ್ ಓಲಾ ಮತ್ತು ಯಾಸ್ಮಿನ್ ಇಲ್ಲಿನ ಜೆಡ್ಡಾದ ಕೆಂಪು ಸಮುದ್ರದ ಆಳದಲ್ಲಿ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದಾರೆ. ಸೌದಿ ಅರೇಬಿಯಾದಲ್ಲಿ ಸಮುದ್ರದಾಳದಲ್ಲಿ ನಡೆದ ಮೊದಲ ಮದುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮದುವೆಯ ಸುದ್ದಿ ಸಖತ್ ವೈರಲ್ ಆಗುತ್ತಿದ್ದು, ಜನ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹಸನ್ ಮತ್ತು ಯಾಸ್ಮಿನ್ ಸ್ಕೂಬಾ ಡೈವಿಂಗ್, ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದರು. ಹೀಗಾಗಿ ಅವರು ಸಮುದ್ರದಲ್ಲಿ ಮದುವೆಯಾಗಬೇಕೆಂದು ಬಯಸಿದ್ದರು ಎನ್ನಲಾಗಿದೆ.