ಬೆಳಗಾವಿ: ಬಡ್ಡಿ ವ್ಯಾಪಾರ ಮಾಡುತ್ತಿದ್ದ ಹೂವಿನ ವ್ಯಾಪಾರಿ ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಹೂವಿನ ವ್ಯಾಪಾರಿ ಶಶಿಕಾಂತ ಶವ ಪತ್ತೆಯಾಗಿತ್ತು. ಈ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಪೊಲೀಸರ ತನಿಖೆಯಲ್ಲಿ ಬೆಚ್ಚಿ ಬೀಳುವ ಅಂಶ ಬಯಲಿಗೆ ಬಂದಿದೆ.
ಶಶಿಕಾಂತ ಕಾಗವಾಡ (Kagawad) ತಾಲೂಕಿನ ಶೇಡಬಾಳ ಗ್ರಾಮದ ನಿವಾಸಿಯಾಗಿದ್ದು, ವ್ಯಾಪಾರದೊಂದಿಗೆ ಬಡ್ಡಿ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಕಳೆದ ಭಾನುವಾರ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸದ್ಯ ಪ್ರಕರಣ ಬೇಧಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭೈಮುದ್ದಿನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ 6 ತಿಂಗಳ ಹಿಂದೆ ಶಶಿಕಾಂತ ಬಳಿ ಫೈಮುದ್ದೀನ್ ಬಡ್ಡಿ ರೂಪದಲ್ಲಿ ಸಾಲ ಪಡೆದಿದ್ದರು. ಆದರೆ ಸರಿಯಾಗಿ ಬಡ್ಡಿ ನೀಡುತ್ತಿರಲಿಲ್ಲ ಎನ್ನಲಾಗಿದೆ. ಈ ಕುರಿತು ಶಶಿಕಾಂತ ಪ್ರಶ್ನಿಸಿದಾಗ ಕರೆದುಕೊಂಡು ಹೋಗಿ ಕೊಲೆ ಮಾಡಿ ಕಲ್ಲು ಎತ್ತಿ ಹಾಕಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.



















