ಕುಮಟಾ : ತೀರ್ಥಯಾತ್ರೆಗೆ ತೆರಳಿ, ದೇವರ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಕುಮಟಾ ಕತಗಾಲ ಮಾಸ್ತಿಹಳ್ಳ ಮೂಲದ ಕುಟುಂಬವೊಂದು ಭಯಾನಕ ಅನುಭವದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ದರೋಡೆಕೋರರು ಲೂಟಿಗೆ ಯತ್ನಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಟುಂಬವೊಂದು, ಸ್ಥಳೀಯ ಗಜಾನನ ಟ್ರಾವೆಲ್ಸ್‌ನ ಟಿಟಿ ವಾಹನದಲ್ಲಿ ಶಿರಡಿ ಹಾಗೂ ಅಯೋಧ್ಯೆ ಪ್ರವಾಸಕ್ಕೆ ತೆರಳಿತ್ತು. ಪ್ರವಾಸ ಮುಗಿಸಿ ಊರಿಗೆ ಮರಳುತ್ತಿದ್ದಾಗ, ಶುಕ್ರವಾರ ರಾತ್ರಿ ಸೊಲ್ಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಈ ಘಟನೆ ಸಂಭವಿಸಿದೆ.
ಕುಟುಂಬವಿದ್ದ ಟಿಟಿ ವಾಹನವನ್ನು ಮೂರು ಬೈಕ್‌ಗಳಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಚಲಿಸುತ್ತಿದ್ದ ವಾಹನದ ಹಿಂದಿನ ಬಾಗಿಲಿಗೆ ಜಿಗಿದು ಒಳನುಗ್ಗಿದ್ದಾರೆ. ಬಳಿಕ ಹಿಂಬದಿಯಲ್ಲಿದ್ದ ಬ್ಯಾಗ್‌ಗಳನ್ನು ಎಳೆದು ಹೊರಗೆಸೆದಿದ್ದಾರೆ. ಈ ಘಟನೆಯಿಂದ ವಾಹನದಲ್ಲಿದ್ದವರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ದರೋಡೆಕೋರರ ಕೃತ್ಯವನ್ನು ಗಮನಿಸಿದ ಚಾಲಕ ಗಣಪತಿ ನಾಯ್ಕ್, ತಕ್ಷಣವೇ ವಾಹನ ನಿಲ್ಲಿಸಿದ್ದಾರೆ. ಆದರೆ, ಕಳ್ಳರು ಇಡೀ ವಾಹನವನ್ನೇ ಸುತ್ತುವರಿದು ದಾಳಿ ಮಾಡಲು ಮುಂದಾಗಿದ್ದಾರೆ. ಈ ವೇಳೆ, ಧೈರ್ಯಗೆಡದ ಚಾಲಕ ವಾಹನದಲ್ಲಿ ಅಡುಗೆಗೆ ಇಟ್ಟಿದ್ದ ಪಾತ್ರೆಗಳನ್ನು ಆಯುಧವಾಗಿ ಹಿಡಿದು ಅವರನ್ನು ಎದುರಿಸಲು ಮುಂದಾಗಿದ್ದಾರೆ. ಚಾಲಕನ ಧೈರ್ಯವನ್ನು ಕಂಡು ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.
ಅದೃಷ್ಟವಶಾತ್, ಕಳ್ಳರು ದೋಚಿದ ಬ್ಯಾಗ್ ನಲ್ಲಿ ಬಟ್ಟೆಗಳು ಹೊರತು ಯಾವುದೇ ನಗದು ಅಥವಾ ಚಿನ್ನಾಭರಣ ಇರಲಿಲ್ಲ. ಪ್ರಾಣಾಪಾಯದಿಂದ ಪಾರಾದ ಕುಟುಂಬವು ದೂರು ನೀಡದೆ ಕುಮಟಾದತ್ತ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ
ಪ್ರವಾಸಿಗರೇ ಎಚ್ಚರ…!
ಈ ಹೆದ್ದಾರಿಯಲ್ಲಿ ಇಂತಹ ಘಟನೆಗಳು ಹೊಸತೇನಲ್ಲ. ಈ ಹಿಂದೆ ಮೈಸೂರು ಮತ್ತು ಮಂಗಳೂರಿನಿಂದ ಬಂದ ಪ್ರವಾಸಿಗರಿಗೂ ಇದೇ ರೀತಿ ದರೋಡೆಯ ಅನುಭವವಾಗಿದೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಸಂಚರಿಸುವ ಪ್ರವಾಸಿ ವಾಹನಗಳೇ ಇವರ ಗುರಿಯಾಗಿದ್ದು, ಅಪಘಾತವಾದಂತೆ ನಟಿಸಿ ವಾಹನ ನಿಲ್ಲಿಸಿ ಲೂಟಿ ಮಾಡುವುದು ಈ ಗ್ಯಾಂಗ್‌ನ ಕಾರ್ಯಶೈಲಿಯಾಗಿದೆ.