ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿನ (GIMS) ಮಗು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಒಂದು ದಿನದ ಗಂಡು ಮಗುವನ್ನು ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಿದ್ದಾರೆ ಎನ್ನಲಾಗಿದೆ. ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಮಹಿಳೆಯ ಮಗು ನಾಪತ್ತೆಯಾಗಿದೆ.
ಗ್ರಾಮದ ಕಸ್ತೂರಿ ಎಂಬುವರು ಹೆರಿಗೆ ನೋವಿನಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ 4 ಗಂಟೆಯ ವೇಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಸೋಮವಾರ ಸಂಜೆ ನರ್ಸ್ ವೇಷದಲ್ಲಿ ಸಂಪೂರ್ಣ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಮಹಿಳೆಯರು “ರಕ್ತ ತಪಾಸಣೆ ಮಾಡಬೇಕು ಮಗು ಕರೆದುಕೊಂಡು ಬನ್ನಿ” ಎಂದು ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ.
ಸದ್ಯ ತಾಯಿ ಗೋಳಾಡುತ್ತಿದ್ದು, ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರುಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.