ಬೆಂಗಳೂರು | ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ KPCC ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಅವರು ನೋಟಿಸ್ ನೀಡಿದ್ದು, ಘಟನೆಯ ಕುರಿತಾಗಿ ಸ್ಪಷ್ಟನೆ ನೀಡುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ರಾಜೀವ್ ಗೌಡ ಅವರು 2023ರ ವಿಧಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇತ್ತೀಚೆಗೆ ಬ್ಯಾನರ್ ವಿಚಾರವಾಗಿ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರ ಜೊತೆ ಫೋನ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ನೋಟಿಸ್ ನಲ್ಲಿ ಏನಿದೆ?
ತಾವು ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮದ ಸಭೆಯೊಂದಕ್ಕೆ ಸಂಬಂಧಪಟ್ಟಂತೆ ತಾವುಗಳು ಬ್ಯಾನರ್’ಗಳನ್ನು ನಗರಸಭೆ ವ್ಯಾಪ್ತಿಯಲ್ಲಿ ಹಾಕಿರುವುದರ ಬಗ್ಗೆ ಸದರಿ ನಗರಸಭೆ ಪೌರಾಯುಕ್ತರೊಂದಿಗೆ ದೂರವಾಣಿ ಸಂಭಾಷಣೆ ನಡೆಸುವಾಗ ವ್ಯಕ್ತಿಗತ ನಿಂದನೆ ಮಾಡಿ, ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿರುವ ವಿಷಯಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ.

ತಮ್ಮ ಈ ವರ್ತನೆ ಹಾಗೂ ತಾವು ಸದರಿ ನಗರಸಭೆ ಪೌರಾಯುಕ್ತರೊಂದಿಗೆ ಆಡಿರುವ ಮಾತುಗಳಿಂದ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತದೆ ಹಾಗೂ ತಾವುಗಳು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತೀರೆಂದು ತಿಳಿದು ಈ ಕಾರಣ ಕೇಳಿ ನೋಟೀಸು ನೀಡಲಾಗುತ್ತಿದೆ. ಈ ನೋಟೀಸ್ ನೀಡಿದ ಒಂದು ವಾರದ ಒಳಗಾಗಿ ಈ ಬಗ್ಗೆ ಸೂಕ್ತ ಸಮಜಾಷಿ ನೀಡಬೇಕು, ಇಲ್ಲವಾದಲ್ಲಿ ಈ ಬಗ್ಗೆ ಶಿಸ್ತು ಸಮಿತಿಯು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ತಿಳಿಸಿದೆ.
ಬಂಧನ ಭೀತಿಯಲ್ಲಿ ರಾಜೀವ್ ಗೌಡ!
ಸದ್ಯ ಬಂಧನ ಭೀತಿಯಿಂದ ನಿನ್ನೆ ರಾತ್ರಿ ರಾಜೀವ್ ಗೌಡ ಪರಾರಿಯಾಗಿದ್ದು, ಆತನ 2 ಮೊಬೈಲ್ಗಳು ಕೂಡ ಸ್ವಿಚ್ಆಫ್ ಆಗಿವೆ. ಹೀಗಾಗಿ ಪೊಲೀಸರ ಮೂರು ತಂಡಗಳು ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಆರೋಪಿಗಾಗಿ ಹಲವೆಡೆ ಹುಡುಕಾಟ ನಡೆಸುತ್ತಿದೆ. ಮತ್ತೊಂದೆಡೆ ರಾಜೀವ್ ಗೌಡನನ್ನು ಬಂಧಿಸದಿದ್ರೆ ಶಿಡ್ಲಘಟ್ಟ ಬಂದ್ ಮಾಡುವುದಾಗಿ ಎನ್ಡಿಎ ಮುಖಂಡರು ಪೊಲೀಸರಿಗೆ ಎಚ್ಚರಿಕೆ ಕೂಡ ನೀಡಿರುವ ಕಾರಣ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಇದನ್ನೂ ಓದಿ : ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ಸೂರ್ಯ ರಶ್ಮಿ.. ‘ಸಂಕ್ರಾಂತಿ’ ವಿಸ್ಮಯವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು!


















