ಗ್ವಾಲಿಯರ್: 5 ವರ್ಷದ ಬಾಲಕಿಯ ಮೇಲೆ ನೆರೆಮನೆಯ ಯುವಕನೇ ಅತ್ಯಾಚಾರವೆಸಗಿ, ಆಕೆಯ ಮೇಲೆ ಕ್ರೂರ ದೈಹಿಕ ದಾಳಿಯನ್ನೂ ನಡೆಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಮನೆಯ ಸಮೀಪದ ನಿರ್ಜನ ಕಟ್ಟಡವೊಂದಕ್ಕೆ ಮಗುವನ್ನು ಕರೆದೊಯ್ದ 17 ವರ್ಷದ ಯುವಕ, ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಬಾಲಕಿಯ ತಲೆಯನ್ನು ನೆಲಕ್ಕೆ ಬಡಿದು, ಆಕೆಯ ಗುಪ್ತಾಂಗಕ್ಕೆ ಹಲವು ರೀತಿಯಲ್ಲಿ ಗಾಯಗಳನ್ನು ಉಂಟುಮಾಡಿ ಭೀಕರ ದೈಹಿಕ ಹಲ್ಲೆ ನಡೆಸಿದ್ದಾನೆ.
ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಬಾಲಕಿಯ ಹೆತ್ತವರು ಆಗ್ರಹಿಸಿದ್ದಾರೆ.
ಬಾಲಕಿಯ ಶರೀರ ಪೂರ್ತಿ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಖಾಸಗಿ ಭಾಗಗಳಿಗೆ ತೀವ್ರ ಹಾನಿಯಾಗಿದೆ. ಹೀಗಾಗಿ, ಶಸ್ತ್ರಚಿಕಿತ್ಸೆ ನಡೆಸಿ ಜನನಾಂಗಗಳಿಗೆ 28 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಅತ್ಯಾಚಾರದ ನಂತರ ಆರೋಪಿಯು ಬಾಲಕಿಯ ತಲೆಯನ್ನು ಪದೇ ಪದೇ ನೆಲಕ್ಕೆ ಬಡಿದು ಕೊಲ್ಲಲು ಪ್ರಯತ್ನಿಸಿದ್ದಾನೆ. ಇದರಿಂದಾಗಿಯೇ ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ. ಬಾಲಕಿ ಈಗ ಗ್ವಾಲಿಯರ್‌ನ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.
ವರದಿಗಳ ಪ್ರಕಾರ, ಆರೋಪಿಯು ಕುಡಿದ ಮತ್ತಿನಲ್ಲಿ ಈ ಕೃತ್ಯವೆಸಗಿದ್ದಾನೆ. ಫೆಬ್ರವರಿ 22 ರಂದು ಈ ಘಟನೆ ನಡೆದಿದ್ದು, ಮನೆಯ ಮೇಲ್ಛಾವಣಿಯಲ್ಲಿದ್ದ ಬಾಲಕಿಯನ್ನು ಆತ ಹತ್ತಿರದ ನಿರ್ಜನ ಕಟ್ಟಡಕ್ಕೆ ಕರೆದೊಯ್ದು ಈ ಕೃತ್ಯವೆಸಗಿದ್ದ. ಲೈಂಗಿಕ ಕಿರುಕುಳ ನೀಡಿದ್ದ ಯುವಕ, ನಂತರ ಆಕೆಯನ್ನು ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಕೂಡಲೇ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪ್ರಜ್ಞೆ ಮರಳಿದ ಬಳಿಕ ಬಾಲಕಿಯು, ಘಟನೆ ಬಗ್ಗೆ ಹೆತ್ತವರಿಗೆ ವಿವರಿಸಿದ್ದು, ಬಳಿಕ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಗ್ವಾಲಿಯರ್ ಮೂಲದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಈ ಘಟನೆಯನ್ನು ಖಂಡಿಸಿದ್ದು, ಜಿಲ್ಲಾಡಳಿತ ಮತ್ತು ಪೊಲೀಸರನ್ನು ಸಂಪರ್ಕಿಸಿ ಬಾಲಕಿಗೆ ನ್ಯಾಯ ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ.
“ನಮ್ಮ ರಾಜ್ಯದಲ್ಲಿ ಇಂತಹ ಅಪರಾಧಗಳಿಗೆ ಸ್ಥಳವಿಲ್ಲ. ಘಟನೆಯ ಬಗ್ಗೆ ನಾನು ಮಾಹಿತಿ ಪಡೆದಿಕೊಂಡಿದ್ದೇನೆ. ಜಿಲ್ಲಾಡಳಿತ ಮತ್ತು ಶಿವಪುರಿ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಇಂತಹ ಭಯಾನಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆರೋಪಿಯು 17 ವರ್ಷದವನಾಗಿರುವ ಕಾರಣ ಆತನನ್ನು ಬಾಲ ಆರೋಪಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಆತ ಘೋರ ಕೃತ್ಯವೆಸಗಿರುವ ಕಾರಣ, ಆತನನ್ನು ವಯಸ್ಕನೆಂದು ಪರಿಗಣಿಸಬೇಕು ಮತ್ತು ಮರಣದಂಡನೆ ವಿಧಿಸಬೇಕು ಎಂದು ಬಾಲಕಿಯ ಹೆತ್ತವರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.