ಚೆನ್ನೈ: ನಾಲ್ಕು ತಿಂಗಳ ಗರ್ಭಿಣಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆಡಳಿತಾರೂಢ ಡಿಎಂಕೆ ವಿರುದ್ಧ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿವೆ. ಮತ್ತೊಂದೆಡೆ ಘಟನೆಗೆ ಸಂಬಂಧಿಸಿದ ಹೇಮರಾಜ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಕೊಯಮತ್ತೂರಿನ ಉಡುಪು ತಯಾರಿಕಾ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತ್ರಸ್ತ ಮಹಿಳೆಯು ಆಂಧ್ರಪ್ರದೇಶದ ಚಿತ್ತೂರಿಗೆ ರೈಲಿನಲ್ಲಿ ಹೊರಟಿದ್ದರು. ಆಕೆ 4 ತಿಂಗಳ ಗರ್ಭಿಣಿಯೂ ಹೌದು. ಶುಕ್ರವಾರ ರೈಲು ತಿರುಪತ್ತೂರು ಜಿಲ್ಲೆಯ ಜೋಲಾರ್ ಪೆಟ್ಟಾಯಿಗೆ ತಲುಪುತ್ತಿದ್ದಂತೆ, ಮಹಿಳೆಯರು ರೈಲಿನೊಳಗಿನ ಶೌಚಾಲಯಕ್ಕೆಂದು ಹೋಗಿದ್ದಾರೆ.
ಆಗ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ವ್ಯಕ್ತಿಗಳು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಭೀತಿಗೊಳಗಾದ ಮಹಿಳೆ ಜೋರಾಗಿ ಕಿರುಚುತ್ತಿದ್ದಂತೆ, ಆ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ರೈಲಿನಿಂದ ಹೊರಕ್ಕೆ ನೂಕಿದ್ದಾರೆ. ಕೆಳಗೆ ಬಿದ್ದ ಮಹಿಳೆಯ ಕೈ, ಕಾಲುಗಳಿಗೆ ಗಾಯವಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ಕೂಡಲೇ ಆಕೆಯನ್ನು ವೆಲ್ಲೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೋಲಾರ್ ಪೆಟ್ಟಾಯಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರೈಲ್ವೆ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ತಪ್ಪಿತಸ್ಥರ ಪತ್ತೆಗೆ ಬಲೆ ಬೀಸಿದ್ದಾರೆ. ಈ ನಡುವೆ ಹೇಮರಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸುದ್ದಿ ಬಹಿರಂಗವಾಗುತ್ತಲೇ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಗರ್ಭಿಣಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ರೈಲಿನಿಂದ ನೂಕಿರುವ ಘಟನೆ ಕೇಳಿ ಶಾಕ್ ಆಗಿದೆ. ತಮಿಳುನಾಡಿನಲ್ಲಿ ಮಹಿಳೆಯರು ರಸ್ತೆ, ಶಾಲೆ, ಕಾಲೇಜು, ಕೆಲಸದ ಸ್ಥಳದಲ್ಲಿ ಮಾತ್ರವಲ್ಲ, ರೈಲುಗಳಲ್ಲೂ ಸುರಕ್ಷಿತವಲ್ಲ ಎಂಬುದು ರಾಜ್ಯಕ್ಕೆ ನಾಚಿಕೆಗೇಡಿನ ವಿಚಾರ. ಇಂತಹ ಘಟನಾವಳಿಗಳು ಮರುಕಳಿಸುತ್ತಿರುವುದು ಮಹಿಳೆಯರನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರದ ವೈಫಲ್ಯವನ್ನು ತೋರಿಸುತ್ತಿದೆ. ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಳನಿಸ್ವಾಮಿ ಆಗ್ರಹಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ತಮಿಳುನಾಡಿನಲ್ಲಿ ಲೈಂಗಿಕ ಕಿರುಕುಳದ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಫೆ.4ರಂದು ಪಶ್ಚಿಮ ಬಂಗಾಳದ 18 ವರ್ಷದ ಯುವತಿಯ ಮೇಲೆ ಚೆನ್ನೈ ಬಸ್ ನಿಲ್ದಾಣದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಜನವರಿ 27ರಂದು ಮೂವರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿತ್ತು. ಕಳೆದ ಡಿಸೆಂಬರ್ ನಲ್ಲಿ ಅಣ್ಣಾ ವಿವಿಯಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ಕಿರುಕುಳ ದೇಶಾದ್ಯಂತ ಸದ್ದು ಮಾಡಿತ್ತು.