ಕಲೆ ಅನ್ನೋದು ರಕ್ತದಲ್ಲಿ ಜಿನುಗುತ್ತಿರುತ್ತದೆ ಎಬ ಮಾತಿದೆ. ಆದರೆ, ನಮ್ಮ ನಮ್ಮ ಸ್ಯಾಂಡಲ್ ವುಡ್ ಇದೀಗ ಹೊಸದೊಂದು ದಾಖಲೆಗೆ ಸಾಕ್ಷಿಯಾಗ್ತಿದೆ. ಒಂದೇ ಕುಟುಂಬದ ಮೂರನೇ ತಲೆಮಾರಿನ ಕುಡಿಯೊಂದು ನಿರ್ಮಾಪಕಿಯಾಗಿ ರಂಗ ಪ್ರವೇಶಿಸುವ ಮೂಲಕ ಸಾಧನೆ ಮಾಡುತ್ತಿದ್ದಾರೆ.
ಹೌದು…ಕನ್ನಡ ಚಿತ್ರರಂಗದ ಪಾಲಿಗೆ ದೊಡ್ಮನೆ ಅಂತಲೇ ಕರೆಸಿಕೊಳ್ಳುವ ರಾಜ್ ಕುಮಾರ್ ಕುಟುಂಬದ ಹೊಸ ತಲೆಮಾರು ಇದೀಗ ಚಿತ್ರರಂಗಕ್ಕೆ ದಾಂಗುಡಿ ಇಡುತ್ತಿದೆ.
ಪಾರ್ವತಮ್ಮನವರ ಹಾದಿಯಲ್ಲಿ ಮೊಮ್ಮಗಳು
ಅದು 1975..ಅವತ್ತು ಕನ್ನಡ ಚಿತ್ರರಂಗದ ಮೇರು ಪರ್ವತ ಡಾ ರಾಜ್ ಕುಮಾರ್ ರ ಸುವರ್ಣ ಯುಗ…ರಾಜ್ ಕುಮಾರ್ ಬಣ್ಣ ಹಚ್ಚಿದರೆ ಹುಚ್ಚೆದ್ದು ಕುಣಿಯುವ ಅಪಾರ ಅಭಿಮಾನಿ ದೇವರ ಬಳಗವಿದೆ. 1975 ನಿಜಕ್ಕೂ ಅಣ್ಣಾವ್ರ ಪಾಲಿಗೂ ಒಂದು ಅಪರೂಪದ ವರ್ಷ. ಯಾಕೆಂದ್ರೆ ವರನಟನ ಹೊಸ ಸಿನಿಮಾ ತ್ರಿಮೂರ್ತಿ ಮೂಲಕ ಅದೇ ಮೊದಲ ಬಾರಿಗೆ ಅವರ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ಅಷ್ಟೇ ಬರೋಬ್ಬರಿ ಐದು ದಶಕಗಳೇ ಗತಿಸಿ ಹೋಗಿವೆ. ಇದೀಗ ಅಜ್ಜಿಯ ಹಾದಿಯನ್ನು ಅವರ ಮೊಮ್ಮಗಳಾದ ನಿವೇದಿತಾ ಶಿವರಾಜ್ ಕುಮಾರ್ ತುಳಿದ್ದಾರೆ.
ಅಮ್ಮನ ಬಳಿಕ ಮಗಳೂ ನಿರ್ಮಾಪಕಿ
1975ರಲ್ಲೇ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಪಕಿಯಾದವರು. ಹೊಸ ಬೆಳಕು, ಹಾಲು ಜೇನುವಿನಿಂದ ಆರಂಭವಾಗಿ ಒಡಹುಟ್ಟಿದವರು, ಶಬ್ಧವೇದಿವರೆಗೂ ಅಣ್ಣವ್ರ ಎಲ್ಲ ಸಿನಿಮಾಗಳಿಗೂ ಪಾರ್ವತಮ್ಮನವರೇ ನಿರ್ಮಾಪಕಿ. ಅಷ್ಟೇ ಅಲ್ಲಾ ಪುತ್ರ ಶಿವರಾಜ್ ಕುಮಾರ್ ಅಭಿನಯದ ಓಂ ಸೇರಿದಂತೆ 80ಕ್ಕೂ ಹೆಚ್ಚು ಸಿನಿಮಾಗಳನ್ನು ವಜ್ರೇಶ್ವರಿ ಮತ್ತು ಪೂರ್ಣಿಮಾ ಎಂಟರ್ ಪ್ರೈಸಸ್ ಹೆಸರಿನಲ್ಲಿ ತೆರೆಗೆ ತಂದವರು. ಅತ್ತೆಯ ಹಾದಿಯಲ್ಲೇ ಸಾಗಿದ್ದ ಗೀತಾ ಶಿವರಾಜ್ ಕುಮಾರ್ ಕೂಡ ತಮ್ಮದೇ ಗೀತಾ ಪಿಕ್ಚರ್ಸ್ ಮೂಲಕ ಚಿತ್ರ ನಿರ್ಮಿಸಿದ್ದರು.
ಬೆಳಕಿನಾಚೆಯ ಬೆಳಕು ಹುಡುಕ ಹೊರಟ ನಿವೇದಿತಾ
ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಇದೀಗ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಪರಿಚಯವಾಗುತ್ತಿದ್ದಾರೆ. ಫೈರ್ ಫ್ಲೈ ಎಂಬ ಸಿನಿಮಾ ಮೂಲಕ ಹೊಸಬರ ಟ್ಯಾಲೆಂಟ್ ಮುಂದಿಟ್ಟು ಕೊಂಡು ಸಿನಿಮಾ ನಿರ್ಮಿಸಿದ್ದಾರೆ. ಇದೇ ಏಪ್ರಿಲ್ 24ರಂದು ತೆರೆಗಪ್ಪಳಿಸುತ್ತಿದೆ. ಈ ಮೂಲಕ ಅಣ್ಣಾವ್ರ ಕುಟುಂಬದ ಕುಡಿಯೊಂದು ನಿರ್ಮಾಪಕಿಯಾಗಿ ಎಂಟ್ರಿ ಆಗ್ತಿರೋದಲ್ಲದೆ ಹೊಸ ಭರವಸೆ ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿವೇದಿತಾ ಸಿನಿ ರಂಗಕ್ಕೆ ಮತ್ತಷ್ಟು ವಿಭಿನ್ನ, ವಿನೂತನ ಸಿನಿಮಾಗಳನ್ನು ನೀಡುವ ಮೂಲಕ ಅಜ್ಜಿ, ಅಮ್ಮನ ಹಾದಿಯಲ್ಲಿ ಮುಂದುವರಿಯಲಿ ಎನ್ನುವುದು ಎಲ್ಲರ ಆಶಯವಾಗಿದೆ.