ನವದೆಹಲಿ: ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಘೋಷಣೆಯಾಗಿದೆ.
ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ರಾಜು ಪೂಜಾರಿ ಬೈಂದೂರು ಅವರ ಹೆಸರು ಫೈನಲ್ ಮಾಡಿದೆ. ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಅವರು ಅಧಿಕೃತವಾಗಿ ಹೆಸರು ಘೋಷಿಸಿದ್ದಾರೆ. ಈಗಾಗಲೇ ಬಿಜೆಪಿ ಕಿಶೋರ್ ಕುಮಾರ್ ಪುತ್ತೂರ್ಗೆ ಟಿಕೆಟ್ ಘೋಷಿಸಿದ್ದಾರೆ.
ಇದೇ ಅಕ್ಟೋಬರ್ 21ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಮರು ಚುನಾವಣೆ ನಡೆಯಲಿದೆ. ಹಾಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಅವರು ಲೋಕಸಭೆ ಪ್ರವೇಶಿಸಿದ್ದರಿಂದಾಗಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದೆ.
ಕಾಂಗ್ರೆಸ್ ನಿಂದ ಭುಜಂಗ ಶೆಟ್ಟಿ, ಬೈಂದೂರಿನ ರಾಜು ಪೂಜಾರಿ, ಹರಿಪ್ರಸಾದ್ ರೈ, ಡಿ.ಆರ್.ರಾಜು ಮತ್ತು ಉದಯ್ ಕುಮಾರ್ ಶೆಟ್ಟು ಮುನಿಯಾಲು ಅವರ ಹೆಸರುಗಳು ಕೇಳಿ ಬಂದಿದ್ದವು. ಆದರೆ, ಕೊನೆಯದಾಗಿ ಹೈಕಮಾಂಡ್ ರಾಜು ಪೂಜಾರಿ ಅವರಿಗೆ ಮಣೆ ಹಾಕಿದೆ. ರಾಜು ಪೂಜಾರಿ ಬೈಂದೂರು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದಾರೆ.
ಇದು ದ್ವಿಸದಸ್ಯ ಕ್ಷೇತ್ರವಾಗಿದ್ದು, 2021ರಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಅವರು ಗೆಲುವು ಸಾಧಿಸಿದ್ದರು.