ಐಸಿಸಿ ಟೆಸ್ಟ್ ಬ್ಯಾಟರ್ ಗಳ ನೂತನ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಅಗ್ರ 10ರಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ಆಟಗಾರ ಜೋ ರೂಟ್ ಮೊದಲ ಸ್ಥಾನದಲ್ಲೇ ಉಳಿದಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ಬಾರಿ ಎರಡು ಸ್ಥಾನ ಮೇಲೆರಿ, 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಕಳೆದ ಬಾರಿ ಟಾಪ್-10 ಶ್ರೇಯಾಂಕ ಪಟ್ಟಿಯಿಂದ ಹೊರಬಿದ್ದಿದ್ದ ವಿರಾಟ್ ಕೊಹ್ಲಿ ಈ ಬಾರಿ 6 ಸ್ಥಾನಗಳ ಜಿಗಿತ ಕಂಡು 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿನ ಶ್ರೇಯಾಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದ ರಿಷಭ್ ಪಂತ್ ಈ ಬಾರಿ ಮೂರು ಸ್ಥಾನ ಕುಸಿತ ಕಂಡಿದ್ದು, ಟಾಪ್ 10ರಲ್ಲಿ ಸ್ಥಾನ ಪಡೆದು 9ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಕಳೆದ ಶ್ರೇಯಾಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿ 5 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಪರಿಣಾಮ ಟಾಪ್ 10ರಿಂದ ಹೊರ ಬಿದ್ದಿದ್ದು, 15ನೇ ಸ್ಥಾನಕ್ಕೆ ಜಾರಿದ್ದಾರೆ. ಶುಭ್ ಮನ್ ಗಿಲ್ 16ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಎರಡನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ ಇದ್ದಾರೆ.