ಕ್ರಿಕೆಟ್ ಇತಿಹಾಸದಲ್ಲೇ ಶ್ರಿಲಂಕಾ ಆಟಗಾರ ಹೊಸ ದಾಖಲೆ ಸೃಷ್ಟಿಸಿದ್ದಾರೆ.
147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೀಲಂಕಾ ತಂಡದ ಬ್ಯಾಟರ್ ಕಮಿಂದು ಮೆಂಡಿಸ್ ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಆಡಿದ ಮೊದಲ 8 ಪಂದ್ಯಗಳಲ್ಲೂ ಅರ್ಧಶತಕ ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಈ ವಿಶ್ವ ದಾಖಲೆ ಪಾಕಿಸ್ತಾನದ ಸೌದ್ ಶಕೀಲ್ ಹೆಸರಿನಲ್ಲಿತ್ತು. ಪಾಕ್ ತಂಡದ ಎಡಗೈ ಬ್ಯಾಟರ್ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 50ಕ್ಕೂ ಅಧಿಕ ಸ್ಕೋರ್ ಗಳಿಸಿದ್ದ ಸಾಧನೆ ಮಾಡಿದ್ದರು. ಈಗ ಕಮಿಂದು ಮೆಂಡಿಸ್ 8ನೇ ಬಾರಿ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮಿಂದು ಮೆಂಡಿಸ್ 250 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 16 ಫೋರ್ ಗಳೊಂದಿಗೆ ಅಜೇಯ 182 ರನ್ ಗಳಿಸಿದ್ದಾರೆ. ಈ ಶತಕದೊಂದಿಗೆ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅಲ್ಲದೇ, ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಕಡಿಮೆ ಪಂದ್ಯಗಳ ಮೂಲಕ 1000 ರನ್ ಕಲೆಹಾಕಿದ ವಿಶ್ವದ 2ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಡಾನ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದಾರೆ. ಮೆಂಡಿಸ್ ಅದ್ಭುತ ಆಟದಿಂದಾಗಿ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 602 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿದೆ.