ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕನೇ ಪಂದ್ಯವನ್ನು 186 ರನ್ ಗಳಿಂದ ಗೆದ್ದ ಇಂಗ್ಲೆಂಡ್ ಸರಣಿಯನ್ನು 2-2ರಲ್ಲಿ ಸಮಬಲ ಮಾಡಿಕೊಂಡಿದೆ.
ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ, ಮಳೆಯ ಹಿನ್ನೆಲೆಯಲ್ಲಿ ಕೇವಲ 39 ಓವರ್ ಗಳಿಗೆ ಪಂದ್ಯವನ್ನು ಸೀಮಿತ ಮಾಡಲಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು.
ಮೊದಲ ವಿಕೆಟ್ ಗೆ 48 ರನ್ ಗಳ ಜೊತೆಯಾಟವಾಡಿದ ನಂತರ ಸಾಲ್ಟ್ (22) ಔಟಾದರು. ಆಗ ಬಂದ ವಿಲ್ ಜಾಕ್ಸ್ ಕೇವಲ 10 ರನ್ ಗಳಿಸಿದರು. ಬೆನ್ ಡಕೆಟ್ ಹಾಗೂ ಹ್ಯಾರಿ ಬ್ರೂಕ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 62 ಎಸೆತಗಳನ್ನು ಎದುರಿಸಿದ ಬೆನ್ ಡಕೆಟ್ 1 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 63 ರನ್ ಗಲಿಸಿದರು. ಹ್ಯಾರಿ ಬ್ರೂಕ್ 58 ಎಸೆತಗಳಲ್ಲಿ 11 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 87 ರನ್ ಗಳಿಸಿ ಮಿಂಚಿದರು. ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ಲಿಯಾಮ್ ಲಿವಿಂಗ್ ಸ್ಟೋನ್ ಕೇವಲ 27 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 3 ಫೋರ್ ಗಳೊಂದಿಗೆ ಅಜೇಯ 62 ರನ್ ಗಳಿಸಿ ತಂಡದ ಮೊತ್ತವನ್ನು 312 ರನ್ ಗಳಿಗೆ ಏರಿಸಿದರು.
ಕಠಿಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್ ಮಾರ್ಷ್ (28) ಹಾಗೂ ಟ್ರಾವಿಸ್ ಹೆಡ್ (34) ರನ್ ಗಳಿಸಿದೆ. ಈ ಜೋಡಿ 68 ರನ್ ಗಳ ನಂತರ ಬೇರ್ಪಟ್ಟಿತು. ಆನಂತರ ಇಂಗ್ಲೆಂಡ್ ಬೌಲರ್ ಗಳು ಮಾರಕ ದಾಳಿ ನಡೆಸಲು ಆರಂಭಿಸಿದರು. ಉತ್ತಮ ದಾಳಿ ಸಂಘಟಿಸಿದ ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್ ಹಾಗೂ ಮ್ಯಾಥ್ಯೂ ಪಾಟ್ಸ್ ಆಸ್ಟ್ರೇಲಿಯಾ ಬ್ಯಾಟ್ಸಮನ್ ಗಳನ್ನು ಪೆವಿಲಿಯನ್ ಸೇರಿಸಿದರು. ಸ್ಟೀವ್ ಸ್ಮಿತ್ (5), ಜೋಶ್ ಇಂಗ್ಲಿಸ್ (8), ಮಾರ್ನಸ್ ಲಾಬುಶೇನ್ (4), ಅಲೆಕ್ಸ್ ಕ್ಯಾರಿ (13), ಗ್ಲೆನ್ ಮ್ಯಾಕ್ಸ್ವೆಲ್ (2) ಹಾಗೂ ಶಾನ್ ಅಬಾಟ್ (10) ರನ್ ಗಳಿಸಿದರು. ಹೀಗಾಗಿ ಆಸ್ಟ್ರೇಲಿಯಾ ತಂಡವು 24.4 ಓವರ್ ಗಳಲ್ಲಿ 126 ರನ್ ಗಳಿಸಿ ಆಲೌಟ್ ಆಯಿತು. ಮ್ಯಾಥ್ಯೂ ಪಾಟ್ಸ್ 8 ಓವರ್ ಗಳಲ್ಲಿ 38 ರನ್ ನೀಡಿ 4 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ 3, ಬ್ರೈಡನ್ ಕಾರ್ಸ್ 2 ವಿಕೆಟ್ ಗಳಿಸಿ ಮಿಂಚಿದರು.