ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆದರೆ, ಸಿದ್ದರಾಮಯ್ಯ ಮಾತ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಆಡಳಿತದಲ್ಲಿ ಮುಂದುವರೆದಿದ್ದಾರೆ. ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಸಿಎಂ ಒಬ್ಬರು ಎಫ್ ಐಆರ್ ದಾಖಲಾದರೂ ಆಡಳಿತದಲ್ಲಿ ಮುಂದುವರೆದಿರುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆರೋಪ ಕೇಳಿ ಬಂದ ವೇಳೆ ಯಡಿಯೂರಪ್ಪ ರಾಜೀನಾಮೆ ನೀಡಿ ವಿಚಾರಣೆ ಎದುರಿಸಿದ್ದರು. ರಾಮಕೃಷ್ಣ ಹೆಗಡೆ ಅವರು ಸಹ ರಾಜೀನಾಮೆ ನೀಡಿದ್ದರು. ಲೋಕಾಯುಕ್ತ ಪೊಲೀಸರು ಈಗ ವಿಚಾರಣೆ ಆರಂಭಿಸಿದ್ದಾರೆ. ಈಗ ಸಿಎಂ ಕುಟುಂಬದ ಮೇಲೆ ಭ್ರಷ್ಟಾಚಾರ ಆರೋಪ ಬಂದಿದೆ. ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈಗ ಅವರ ಮೇಲೆಯೇ ಆರೋಪ ಕೇಳಿ ಬಂದಿದೆ. ಆದರೂ ಕಾಂಗ್ರೆಸ್ ಹೈಕಮಾಂಡ್ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾವು ಇಲ್ಲಿ ಸಚಿವರ ರಾಜೀನಾಮೆ ಕೇಳುತ್ತಿಲ್ಲ. ಸಿಎಂ ರಾಜೀನಾಮೆ ಕೇಳುತ್ತಿದ್ದೇವೆ. ಸಿಎಂ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಅಡಿಯಲ್ಲಿ ಇರುವ ಇಲಾಖೆಯ ಕೈಯಲ್ಲಿ ತನಿಖೆ ಮಾಡಲು ಆಗುತ್ತಾ? ಕುಮಾರಸ್ವಾಮಿ ಪ್ರಕರಣದಲ್ಲಿ ಅವರು ಇಲ್ಲಿ ಹೇಗೆ ಪ್ರಬಾವ ಬೀರಲು ಆಗುತ್ತದೆ ಎಂದು ಹೇಳಿದ್ದಾರೆ.