ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಲು ಬಿಜೆಪಿ ಹಾಗೂ ಜೆಡಿಎಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈಗಾಗಲೇ ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ. ಇದು ವಿರೋಧಿ ಪಕ್ಷಗಳಿಗೆ ಸಿಹಿ ಊಟ ನೀಡಿದಂತಾದರೆ, ಸಿದ್ದರಾಮಯ್ಯ ಹಾಗೂ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿವೆ.
ಸರ್ಕಾರವನ್ನು ಹಣೆಯಬೇಕೆಂದು ಕುಳಿತಿದ್ದ ವಿಪಕ್ಷಗಳಿಗೆ ಇದು ಅಸ್ತ್ರವಾಗಿ ಬಿಟ್ಟಿದೆ. ಅದರಲ್ಲೇ ಸಿಎಂ ವಿರುದ್ಧ ಸಿಕ್ಕ ಈ ಅಸ್ತ್ರವನ್ನು ತಮ್ಮ ಪರ ವಾಲಿಸಿಕೊಳ್ಳಲು ಬಿಜೆಪಿಯಂತೂ ಶತಾಯಗತಾಯ ಪ್ರಯತ್ನಿಸುತ್ತಿದೆ. ಇದಕ್ಕಾಗಿ ತಂತ್ರ-ಪ್ರತಿತಂತ್ರದ ಮೊರೆ ಹೋಗಿದೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಇದೊಂದು ಸುವರ್ಣಾವಕಾಶವಾಗಿದೆ.
ಮುಡಾ ವಿಷಯದಲ್ಲಿ ಸಿಎಂ ಹೆಸರು ಕೇಳಿ ಬರುತ್ತಿದ್ದಂತೆ ಮೈಸೂರುವರೆಗೆ ಪಾದಯಾತ್ರೆ ನಡೆಸಿಯೇ ಬಿಟ್ಟಿತ್ತು. ಬೆಂಗಳೂರಿನಿಂದ ಪಾದಯಾತ್ರೆ ಕೈಗೊಂಡಿತ್ತು. ಬಿಜೆಪಿಯ ಆಂತರಿಕ ಭಿನ್ನಮತದ ಮಧ್ಯೆಯೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತು. ಈ ವಿಷಯದಲ್ಲಿ ಬಿಜೆಪಿ ಮೇಲುಗೈ ಕೂಡ ಸಾಧಿಸಿತು. ಆಗ ಮುಡಾ ಹಗರಣದ ಕಾವು ಜೋರಾಗ ತೊಡಗಿತು. ರಾಜ್ಯಪಾಲರೆಂಬ ದಾಳ ಬಳಸಿ ಆಡಳಿತಾರೂಢ ಪಕ್ಷ ಹಣೆಯುವ ಕಾರ್ಯಕ್ಕೆ ಯಶಸ್ವಿಯೂ ಸಿಕ್ಕಿತು. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.
ಇದನ್ನು ಪ್ರಶ್ನಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಬೆನ್ನಲ್ಲೇ ಬಿಜೆಪಿ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿತ್ತು. ಆನಂತರ ಸಿಎಂ ಸಿದ್ದರಾಮಯ್ಯ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದರು. ಆದರೆ, ಅಲ್ಲಿ ಸಿಎಂಗೆ ಹಿನ್ನಡೆಯಾಯಿತು. ತನಿಖೆಗೆ ಕೋರ್ಟ್ ಆದೇಶ ನೀಡಿತು. ಹೀಗಾಗಿ ಸಿಎಂ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಹೇಗಾದರೂ ಮಾಡಿ ಸಿಎಂ ರಾಜೀನಾಮೆ ಪಡೆದು ಕಾಂಗ್ರೆಸ್ ಗೆ ಹಿನ್ನೆಡೆ ಮಾಡಬೇಕೆಂದು ಪ್ರಯತ್ನಿಸುತ್ತಿವೆ, ಈಗ ಈ ತನಿಖೆ ಹಾಗೂ ಕೋರ್ಟ್ ತೀರ್ಪು ಬಿಜೆಪಿ ಪಾಳಯಕ್ಕೆ ಬಹುದೊಡ್ಡ ಅಸ್ತ್ರವಾಗಿದೆ.
ಈಗ ಇದೇ ಅಸ್ತ್ರ ಇಟ್ಟುಕೊಂಡು ಬಿಜೆಪಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧವಾಗಿದೆ. ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಮುಂದಿಟ್ಟುಕೊಂಡು ಗುರುವಾರ ವಿಧಾನಸೌಧದಲ್ಲೂ ಸಂಸದರು, ಶಾಸಕರು ಹೋರಾಟ ನಡೆಸಿದ್ದರು. ಈಗ ವಿಧಾನಸೌಧಕ್ಕೆ ಬೀಗ ಜಡಿದು ಹೋರಾಟ ಮಾಡಲು ಬಿಜೆಪಿ ಮುಂದಾಗಿದ್ದರು. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ದೊಡ್ಡ ಸಂಘರ್ಷವೇ ನಡೆಯುವ ಸಾಧ್ಯತೆ ಇತ್ತು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈಗ ಮತ್ತೆ ಹೋರಾಟದ ಸ್ವರೂಪ ಹೆಚ್ಚಿಸಲು ಬಿಜೆಪಿ ಚಿಂತನೆ ನಡೆಸಿದೆ. ನಾಲ್ಕು ರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ಚುನಾವಣೆಯಲ್ಲೂ ಸಿದ್ದರಾಮಯ್ಯ ಪ್ರಕರಣ ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹರಿಯಾಣದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಮುಡಾ ಹಗರಣ ಮತ್ತು ಸಿದ್ದರಾಮಯ್ಯ ರಾಜೀನಾಮೆಗೆ ಬೇಡಿಕೆ ವಿಚಾರ ಚರ್ಚಾ ವಸ್ತುವಾಗಿದ್ದು, ಸಿದ್ದರಾಮಯ್ಯ ಪ್ರಕರಣ ಇಟ್ಟುಕೊಂಡು ಕಾಂಗ್ರೆಸ್ ಹಣಿಯುವ ಕಾರ್ಯವನ್ನು ಪ್ರಧಾನಿ ಕೂಡ ಮಾಡುತ್ತಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಮೈಕೊಡವಿ ನಿಂತಿದೆ. ಹೋರಾಟದ ಸ್ವರೂಪವನ್ನು ಉಗ್ರವಾಗಿ ಮಾಡಿದೆ. ಹೈಕಮಾಂಡ್ ಗೆ ಪ್ರತಿ ದಿನ ಹೋರಾಟದ ವರದಿ ನೀಡುತ್ತಿದೆ. ಹೈಕಮಾಂಡ್ ಗಮನಿಸುತ್ತಿದೆ ಎಂದು ಭಾವಿಸಿರುವ ಬಿಜೆಪಿ ನಾಯಕರು ಬೀದಿಗೆ ಇಳಿದು ಬಿಟ್ಟಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ಎಫ್‌ಐಆರ್ ದಾಖಲು ಮಾಡುವಂತೆ ಮೈಸೂರು ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಅದರಂತೆ ಈಗ ಲೋಕಾಯುಕ್ತದಲ್ಲಿ ಸಿಎಂ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಹೀಗಾಗಿ ನೈತಿಕತೆ ಆಧಾರದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ.
ಆದರೆ, ಸಿಎಂ ಮಾತ್ರ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ನಾನು ತಪ್ಪು ಮಾಡಿಯೇ ಇಲ್ಲ. ಇದು ಕೇವಲ ರಾಜಕೀಯ ದ್ವೇಷ. ನಾನು 40 ವರ್ಷಗಳಿಂದಲೂ ನನ್ನ ಪ್ರಾಮಾಣಿಕತೆ ಉಳಿಸಿಕೊಂಡು ಬಂದಿದ್ದೇನೆ. ಹೀಗಾಗಿ ಕೊಡುವ ಮಾತೇ ಇಲ್ಲ ಎಂದಿದ್ದಾರೆ. ಆದರೆ, ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾಯ್ದು ನೋಡಬೇಕಿದೆ.