ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆಗೆ ಈಗಾಗಲೇ ಆಂಧ್ರ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ 9 ಸದಸ್ಯರ ತಂಡ ರಚಿಸಲಾಗಿದೆ.
ಗುಂಟೂರು ರೇಂಜ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಸರ್ವಶ್ರೇಷ್ಠ ತ್ರಿಪಾಠಿ ನೇತೃತ್ವದಲ್ಲಿ ತನಿಖೆ ಈ ಕುರಿತು ತನಿಖೆ ನಡೆಸಲು ಸರ್ಕಾರ ಸೂಚಿಸಿದೆ. ಅಲ್ಲದೇ, ಇದರೊಂದಿಗೆ ಹಿಂದಿನ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದಿರುವ ಇತರ ಅಕ್ರಮಗಳ ಕುರಿತೂ ತನಿಖೆ ನಡೆಸಲು ಎಸ್ ಐಟಿಗೆ ಸೂಚಿಸಲಾಗಿದೆ.
ಸರ್ವಶ್ರೇಷ್ಠ ತ್ರಿಪಾಠಿ ಐಪಿಎಸ್ ಅಧಿಕಾರಿ. ಈ ಹಿಂದೆ ಸಂಯೋಜಿತ ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತ್ರಿಪಾಠಿ ಹೊರತಾಗಿ, ಎಸ್ ಐಟಿ ತಂಡವು ವಿಶಾಖಪಟ್ಟಣಂ ರೇಂಜ್ ಗೆ ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಗೋಪಿನಾಥ್ ಜಟ್ಟಿ, ಐಪಿಎಸ್ ಸೇರಿದಂತೆ ಇತರ ಪ್ರಮುಖ ಸದಸ್ಯರನ್ನು ಈ ತಂಡ ಒಳಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ ತಯಾರಿಕೆಯಲ್ಲಿ ಹಂದಿ, ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವ ಆರೋಪದ ಹಿನ್ನೆಲೆಯ್ಲಲಿ ಈಗಾಗಲೇ ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇತರರ ವಿರುದ್ಧ ಹೈದರಾಬಾದ್ ನಲ್ಲಿ ದೂರು ದಾಖಲಿಸಲಾಗಿದೆ.
ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಐಪಿಸಿ ಸೆಕ್ಷನ್ 298 ಮತ್ತು 299 ರ ಅಡಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಮತ್ತು ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಜಗನ್ ಮೋಹನ್ ರೆಡ್ಡಿ ಮತ್ತು ಇತರರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.
ಈ ಹಿಂದೆ ಟಿಟಿಡಿಗೆ ತುಪ್ಪ ಪೂರೈಸುತ್ತಿದ್ದ ಕರ್ನಾಟಕದ ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು. ಅಲ್ಲದೇ, ಇದೇ ಟೆಂಡರ್ ನಲ್ಲಿ ಭಾಗವಹಿಸಿದ್ದ ಮತ್ತೊಂದು ಸಂಸ್ಥೆ, ಒಂದು ಕೆಜಿ ಆಕಳು ತುಪ್ಪಕ್ಕೆ 320 ರೂ. ಬೆಲೆ ನಿಗದಿ ಪಡಿಸಿತ್ತು. ಇದು ಕಳಪೆ ತುಪ್ಪ ಎಂದು ಸಿಬ್ಬಂದಿ ಹಲವು ಬಾರಿ ಹೇಳಿದ್ದರು ಎನ್ನಲಾಗಿದೆ. ಆದರೆ, ನಂದಿನಿ ತುಪ್ಪದ ಬೆಲೆ 600 ರೂ. ಎಂದಿತ್ತು. ಹೀಗಾಗಿ ನಂದಿನಿ ತುಪ್ಪ ಬಳಕೆ ಮಾಡಿರಲಿಲ್ಲ.