ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ವಿಚಾರ ದೊಡ್ಡ ತಲೆನೋವಿಗೆ ಕಾರಣವಾಗುತ್ತಿದೆ. ಒಂದೆಡೆ ವಿರೋಧಿಗಳ ರಾಜೀನಾಮೆಯ ಪಟ್ಟು, ಇನ್ನೊಂದೆಡೆ ತನಿಖೆಯ ಚಿಂತೆ ಅವರನ್ನು ಕಂಗಾಲು ಮಾಡಿದೆ. ಈ ಮಧ್ಯೆ ಕೇಂದ್ರ ಸಚಿವ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಫೇಸ್ ಬುಕ್ ನಲ್ಲಿ ವ್ಯಂಗ್ಯವಾಗಿ ಸಂದೇಶ ಪ್ರಕಟಿಸಿರುವ ಕುಮಾರಸ್ವಾಮಿ, ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇಉಘೇ ಎನ್ನಬೇಕು. ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು. ನಿಮಗೂ ಭಯವಿದೆ! ಅದೇ ಈ ನೆಲದ ಕಾನೂನಿನ ಶಕ್ತಿ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಸಿಎಂ, ಶ್ರೀಮಾನ್ ಸಿದ್ದರಾಮಯ್ಯನವರೇ.. ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇಉಘೇ ಎನ್ನಲೇಬೇಕು. ಅಂದು: ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ! ಇಂದು: ಮೂಡಾಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇsss ಗತಿ!! Karma Hit back ಎಂದರೇ ಇದೇ ಅಲ್ಲವೇ Siddaramaiah ನವರೇ? ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು.
ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ.
ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ‘ ಸಿದ್ದಾಪರಾದ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ. ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು..ನಿಮಗೂ ಭಯವಿದೆsss!! ಅದೇ ಈ ನೆಲದ ಕಾನೂನಿನ ಶಕ್ತಿ ಎಂದು ಬರೆದುಕೊಂಡಿದ್ದಾರೆ.
ಸಿಎಂ ವಿರುದ್ಧ ತನಿಖೆಗೆ ಕರ್ನಾಟಕ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ಈಗಾಗಲೇ ಆದೇಶ ಪ್ರಕಟಿಸಿವೆ. ಇದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸುವ ಸಾಧ್ಯತೆ ಇದೆ.
ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟಿಸುತ್ತಿದ್ದಾರೆ. ಎಲ್ಲವನ್ನು ಕಾನೂನು ರೀತಿಯಲ್ಲೇ ಎದುರಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಮತ್ತೆ ಮತ್ತೆ ದೃಢವಾಗಿ ಹೇಳಿದ್ದಾರೆ.