ಬಾಗಲಕೋಟೆ: ಜಿಲ್ಲೆಯಲ್ಲಿ ಕ್ಯಾಂಟರ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಹತ್ತಿರ ನಡೆದಿದೆ. ಕಾರೊಂದು ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ (Accident) ಲಕ್ಷ್ಮಣ ವಡ್ಡರ್(55), ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕ(50), ಚಾಲಕ ರಫಿಕ್ ಮುಲ್ಲಾ(25) ಸಾವನ್ನಪ್ಪಿದ ದುರ್ದೈಗಳು ಎಂದು ತಿಳಿದು ಬಂದಿದೆ.
ಸಾವನ್ನಪ್ಪಿದ ದುರ್ದೈವಿಗಳು ವಿಜಯಪುರ ಜಿಲ್ಲೆಯ ಬಿದರಕುಂದಿ ಗ್ರಾಮದವರು ಎನ್ನಲಾಗಿದೆ. ಹೊಸಪೇಟೆ ಬಳಿಯ ಹುಲಿಗೆಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ಕ್ಯಾಂಟರ್-ಕಾರು ಮುಖಾಮುಖಿ ಡಿಕ್ಕಿಯಾಗಿ ಎನ್ನಲಾಗಿದೆ.
ಕಾರಿನಲ್ಲಿದ್ದವರು ಮುದ್ದೇಬಿಹಾಳ ಮಾರ್ಗವಾಗಿ ತೆರಳುತ್ತಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಮಾರ್ಗವಾಗಿ ಬರುತ್ತಿತ್ತು. ಈ ವೇಳೆ ಎರಡೂ ಮುಖಾಮುಖಿ ಡಿಕ್ಕಿಯಾಗಿವೆ. ನಿದ್ದೆಯ ಮಂಪರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.