ಬೆಂಗಳೂರು: ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಶಾಸಕ ಮುನಿರತ್ನ ಈಗ ಬೇಲ್ ಮೇಲೆ ಹೊರ ಬಂದಿದ್ದಾರೆ. ಆದರೆ, ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಈ ಮಧ್ಯೆ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ವಿರೋಧಿಗಳಿಗೆ ಹೆಚ್ ಐವಿ (ಏಡ್ಸ್) ರೋಗವಿರುವವರ ರಕ್ತವನ್ನು ಇಂಜೆಕ್ಟ್ ಮಾಡುತ್ತಿದ್ದರು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಬಯಾಲಜಿಕಲ್ ವಾರ್ ತರಹ ಕೃತ್ಯ ಎಸಗಿದ್ದಾರೆ. ಅವರು ವಿರೋಧಿಗಳಿಗೆ ಎಚ್ ಐವಿ ರಕ್ತವನ್ನು ಇಂಜೆಕ್ಟ್ ಮಾಡಿ ಬಯಾಲಜಿಕಲ್ ವಾರ್ ತರಹ ಮಾಡಿದ್ದಾರೆ. ಹೀಗಾಗಿಯೇ ತನಿಖೆಗೆ ಒಂದು ವಿಶೇಷ ತಂಡ ರಚನೆಯಾಗಬೇಕು.
ಅವರು ಈ ಕೃತ್ಯದಲ್ಲಿ ಯಾರನ್ನು ಯಾವ ರೀತಿ ಬಳಕೆ ಮಾಡಿಕೊಂಡಿದ್ದಾರೆ ಎಂಬುವುದು ಬೆಳಕಿಗೆ ಬರಬೇಕು. ಯಾರಿಂದ ಎಚ್ ಐವಿ ಇಂಜೆಕ್ಟ್ ಮಾಡಲು ಬಳಸಿಕೊಂಡಿದ್ದಾರೆ ಎಂಬುವುದು ಸುಧೀರ್ಘವಾಗಿ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಅವರು ಇಲ್ಲಿಯವರೆಗೆ ಕೇಳಿರದ ಕಾರ್ಯಾಚರಣೆಗಳನ್ನು ಮಾಡಿದ್ದಾರೆ. ಈ ರೀತಿ ವಿದೇಶಗಳಲ್ಲಿ ಬಯಾಲಜಿಕಲ್ ವಾರ್ ನಡೆಯುತ್ತದೆ. ಆದರೆ, ಇವರದ್ದು ಯಾವ ರೀತಿಯ ಮನಸ್ಥಿತಿ ಗೊತ್ತಿಲ್ಲ. ಆದರೆ, ಇದು ಸದ್ಯ ವಾಸ್ತವ ಘಟನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುವ ಮೂಲಕ ಬಿಜೆಪಿಯವರ ಬಣ್ಣ ಬಯಲಾಗಬೇಕು. ಬಯೋಲಾಜಿಕಲ್ ವಾರ್ ಮಾಡಿಸಿದ್ದ ಆರೋಪಿ ಮುನಿರತ್ನ ಬೆನ್ನಿಗೆ ಸಿಟಿ ರವಿ, ಆರ್. ಅಶೋಕ್, ಕುಮಾರಸ್ವಾಮಿ ಇದ್ದಾರೆ. ಕಾಂಗ್ರೆಸ್ ನವರ ಮೇಲೆ ಇಂಥದ್ದೇ ಮಾಡಿ ಅಂತ ಬಿಜೆಪಿಯವರು ಬೆಂಬಲ ಕೊಡುತ್ತಿದ್ದಾರೆ. ಅದು ಕೂಡ ತನಿಖೆ ಆಗಬೇಕು. ಒಕ್ಕಲಿಗ ಸಮುದಾಯ ದಲಿತ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಸಮುದಾಯದ ಸ್ವಾಮೀಜಿಗಳು ಹೋರಾಟದ ನೇತೃತ್ವ ವಹಿಸಬೇಕು. ಇಲ್ಲವಾದರೆ ದಾರಿ ಹೋಕರು ಕೂಡ ಮಾತನಾಡುತ್ತಾರೆ ಎಂದು ಗುಡುಗಿದ್ದಾರೆ.