ಬೆಂಗಳೂರು: ಜಾತಿ ನಿಂದನೆ, ಬೆದರಿಕೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬರುತ್ತಿದ್ದಂತೆ ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣದಲ್ಲೆ ಅರೆಸ್ಟ್ ಆಗಿದ್ದಾರೆ. ಆದರೆ, ಈ ಮಧ್ಯೆ ಅವರ ಬಳಿ ಬೇರೆಯವರ ಖಾಸಗಿ ವಿಡಿಯೋಗಳು ಕೂಡ ಇವೆ ಎಂಬ ಆರೋಪ ಕೇಳಿ ಬಂದಿದೆ.
ಮುನಿರತ್ನ ಹತ್ತಿರ ಹಲವರ ಖಾಸಗಿ ವಿಡಿಯೋಗಳಿವೆ ಎಂದು ಅತ್ಯಾಚಾರ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಾಜಕೀಯ ಎದುರಾಳಿಗಳ ಹಣಿಯಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು. ಅತ್ಯಾಚಾರ ಸಂತ್ರಸ್ತೆ ಮೂಲಕ ಹನಿಟ್ರ್ಯಾಪ್ ಗೆ ಯತ್ನಿಸಿದ್ದರು. ಹನಿಟ್ರ್ಯಾಪ್ ಗೆ ಅಮಾಯಕ ಹೆಚ್ ಐವಿ ಸೋಂಕಿತರನ್ನೂ ಬಳಸಾಗುತ್ತಿತ್ತು ಎಂಬ ಆರೋಪವನ್ನು ಸಂತ್ರಸ್ತೆ ಮಾಡಿದ್ದಾರೆ.
ಅಲ್ಲದೇ, ಮುನಿರತ್ನ ಕೂಡ ಅಟ್ರಾಸಿಟಿ ಕೇಸ್ ಬಳಕೆ ಮಾಡಿಕೊಂಡು ವಿರೋಧಿಗಳನ್ನು ಹಣಿಯಲು ಯತ್ನಿಸುತ್ತಿದ್ದರು. ಈಗ ಅದೇ ಪ್ರಕರಣ ಅವರಿಗೆ ತಿರುಗು ಬಾಣವಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಹಣ ಕೊಟ್ಟು ಪ್ರಭಾವ ಬಳಸಿ ಅಟ್ರಾಸಿಟಿ ಕೇಸ್ಗಳನ್ನು ದಾಖಲಿಸುತ್ತಿದ್ದರು. ಈ ಹಿಂದೆ ರಾಜರಾಜೇಶ್ವರಿ ನಗರದಲ್ಲಿ ಹಲವರ ವಿರುದ್ಧ ಅಟ್ರಾಸಿಟಿ ಪ್ರಕರಣಗಳು ದಾಖಲಾಗಿದ್ದವು ಎಂದು ಮೂಲಗಳು ಹೇಳಿವೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುನಿರತ್ನ ಈಗ ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ.