ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನಾಗಮಂಗಲ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 52 ಆರೋಪಿಗಳನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನೂರಾರು ಸಂಖ್ಯೆ ಯುವಕರು ಗಲಾಟೆ ಮಾಡಿದ್ದರಿಂದ, ಉದ್ರಿಕ್ತ ಆರೋಪಿಗಳನ್ನು ಪತ್ತೆ ಹಚ್ಚುವುದು ಸದ್ಯ ಪೊಲೀಸರಿಗೆ ತಲೆನೋವಾಗಿದೆ.
ಸಿಸಿ ಕ್ಯಾಮರಾ ದೃಶ್ಯಗಳನ್ನ ಆಧರಿಸಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಸದ್ಯ ಇಲ್ಲಿಯವರೆಗೆ 150 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 30 ಮುಸ್ಲಿಂ ಯುವಕರು ಮತ್ತು 23 ಹಿಂದೂ ಯುವಕರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ 97 ಜನರಿಗಾಗಿ ಶೋಧ ಕಾರ್ಯ ನಡೆದಿದೆ.
ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ಸ್ಥಳ ಪರಿಶೀಲನೆ ನಡೆಸಿದೆ. ಸುಟ್ಟುಹೋದ ಅಂಗಡಿ ಮುಂಗಟ್ಟುಗಳನ್ನು ತಜ್ಞರು ಪರಿಶೀಲಿಸಿದ್ದು, ತನಿಖೆಗೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದಾರೆ. FSL ತಜ್ಞರು ಕೂಡ ಮಾಹಿತಿ ಸಂಗ್ರಹಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದರು. ಲಾಠಿಚಾರ್ಜ್ ಮಾಡಿ 2 ಗುಂಪುಗಳನ್ನು ಚದುರಿಸಿದ್ದರು. ಈಗ ಸ್ಥಳದಲ್ಲಿ 144 ಸೆಕ್ಷನ್ ಘೋಷಿಸಲಾಗಿದೆ.