ನವದೆಹಲಿ: ಹಿರಿಯ ರಾಜಕಾರಣಿ, ಸಿಪಿಐ-ಮಾರ್ಕ್ಸಿಸ್ಟ್ ಪಕ್ಷದ ನಾಯಕ ಹಾಗೂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ನಿಧನರಾಗಿದ್ದಾರೆ.
ಸೀತಾರಾಮ್ ಯೆಚೂರಿ(72) ಉಸಿರಾಟದ ಸಮಸ್ಯೆಯಿಂದಾಗಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಅವರ ಪಕ್ಷದ ಪ್ರಕಟಣೆಯಲ್ಲಿ, ‘ಅವರು ಆಕ್ಸಿಜನ್ ಸಪೋರ್ಟ್‌ನಲ್ಲಿದ್ದಾರೆ. ವೈದ್ಯರ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಸಮಯದಲ್ಲಿ ಗಂಭೀರವಾಗಿದೆ” ಎಂದು ತಿಳಿಸಿತ್ತು.
ತೀವ್ರ ಜ್ವರದಿಂದ ಬಳಲುತ್ತಿದ್ದ ಯೆಚೂರಿ ಅವರನ್ನು ಆಗಸ್ಟ್ 19 ರಂದು ಏಮ್ಸ್‌ನ ತುರ್ತು ವಿಭಾಗಕ್ಕೆ ದಾಖಲಿಸಲಾಗಿತ್ತು. ನ್ಯುಮೋನಿಯಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಇತ್ತೀಚೆಗಷ್ಟೇ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಯೆಚೂರಿ ಅವರು 1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸೇರಿ, ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಆನಂತರ ರಾಜಕೀಯವಾಗಿ ಬೆಳೆದು ನಿಂತಿದ್ದರು. 1984 ರಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದ ಅವರು ಬಳಿಕ ಶಾಶ್ವತ ಆಹ್ವಾನಿತರೆನಿಸಿಕೊಂಡಿದ್ದರು. 1992 ರ ಹೊತ್ತಿಗೆ, ಅವರು ಪಾಲಿಟ್ ಬ್ಯೂರೊದ ಸದಸ್ಯರಾಗಿದ್ದರು. ನಂತರ ಮೂರು ದಶಕಗಳ ಕಾಲ ಆ ಹುದ್ದೆ ಅಲಂಕರಿಸಿದ್ದರು.
ಯೆಚೂರಿ ಅವರು 2005 ರಿಂದ 2017 ರ ವರೆಗೆ ಸಂಸತ್ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.