ನವದೆಹಲಿ: ಮೀಸಲಾತಿ ವಿಚಾರವಾಗಿ ಅಮೆರಿಕದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ತೀವ್ರವಾಗಿ ಆಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭಾರತವು ಉತ್ತಮ ಸ್ಥಿತಿಗೆ ತಲುಪಿದಾಗ ಕಾಂಗ್ರೆಸ್, ಮೀಸಲಾತಿ ರದ್ದು ಮಾಡುವ ಕುರಿತು ಚಿಂತನೆ ನಡೆಸಲಿದೆ. ಸದ್ಯ, ಅದರ ಚಿಂತನೆ ಇಲ್ಲ ಎಂದು ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಮಿತ್ ಶಾ ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದೇಶವನ್ನು ವಿಭಜಿಸುವ ಶಕ್ತಿಗಳ ಜೊತೆ ನಿಂತು ದೇಶ ವಿರೋಧಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ. ಇದು ಕಾಂಗ್ರೆಸ್ ನ ಮೀಸಲಾತಿ ವಿರೋಧಿ ಮನೋಭಾವ ತೋರಿಸುತ್ತದೆ. ಅವರ ಈ ಮನಸ್ಥಿತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಯಾವಾಗಲೂ ರಾಷ್ಟ್ರದ ಭದ್ರತೆಗೆ ಬೆದರಿಕೆ ಮತ್ತು ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಾರೆ. ‘ಪ್ರಾದೇಶಿಕತೆ, ಧರ್ಮ ಮತ್ತು ಭಾಷಿಕ ಭಿನ್ನಾಭಿಪ್ರಾಯ ಉಂಟುಮಾಡುವ ಕಾಂಗ್ರೆಸ್‌ನ ರಾಜಕೀಯವನ್ನು ರಾಹುಲ್ ಗಾಂಧಿಯವರ ಹೇಳಿಕೆಯು ಬಯಲು ಮಾಡಿದೆ. ದೇಶದಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ಮಾತನಾಡುವ ಮೂಲಕ ರಾಹುಲ್ ಗಾಂಧಿ ಮತ್ತೊಮ್ಮೆ ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ಮುಖವನ್ನು ಮುನ್ನೆಲೆಗೆ ತಂದಿದ್ದಾರೆ ಎಂದಿರುವ ಶಾ, ಬಿಜೆಪಿ ಅಧಿಕಾರದಲ್ಲಿರುವವರೆಗೆ ಮೀಸಲಾತಿಯನ್ನು ರದ್ದುಗೊಳಿಸುವುದಾಗಲಿ, ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.