ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು, ಅದನ್ನು ಶಮನಗೊಳಿಸುವ ಶಕ್ತಿ ಭಾರತಕ್ಕೆ ಇದೆ ಎಂದು ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ ಬೆನ್ನಲ್ಲಿಯೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಮೋನಿ ಕೂಡ ಇದೇ ರೀತಿ ಮಾತನಾಡಿದ್ದಾರೆ.
ಉಕ್ರೇನ್ ನಲ್ಲಿ ಬಿಕ್ಕಟ್ಟು ಪರಿಹರಿಸುವಲ್ಲಿ ಭಾರತ ಮತ್ತು ಚೀನಾದಂತಹ ದೇಶಗಳು ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಇಟಲಿಯ ಸೆರ್ನೊಬಿಯೊ ನಗರದ ಅಂಬ್ರೊಸೆಟ್ಟಿ ಫೋರಮ್ ನಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ರನ್ನು ಭೇಟಿ ಮಾಡಿದ ನಂತರ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವ್ಲಾದಿಮಿರ್ ಪುಟಿನ್ ಮಾತನಾಡಿದ ಎರಡು ದಿನಗಳ ನಂತರ ಈ ಕುರಿತು ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಕಾನೂನನ್ನು ನಾವು ಉಲ್ಲಂಘಿಸಿದರೆ ಅವ್ಯವಸ್ಥೆ ಮತ್ತು ಬಿಕ್ಕಟ್ಟು ಹೆಚ್ಚುತ್ತ ಹೋಗುತ್ತದೆ. ಬಿಕ್ಕಟ್ಟಿನ ಹೆಚ್ಚಳದೊಂದಿಗೆ, ಭೌಗೋಳಿಕ-ಆರ್ಥಿಕ ಜಾಗದ ನೈಸರ್ಗಿಕ ವಿಘಟನೆ ಹೊಂದಿರುತ್ತೇವೆ ಎಂದು ಹೇಳಿದ್ದಾರೆ.
ದೀರ್ಘಾವಧಿಯಲ್ಲಿ ಆರ್ಥಿಕ ಜಾಗತೀಕರಣ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಪ್ರಶ್ನಿಸುವುದು ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಹೀಗಾಗಿ ಭಾರತ ಹಾಗೂ ಚೀನಾದಂತಹ ದೇಶಗಳು ಉಕ್ರೇನಿನಲ್ಲಿ ಸಮಸ್ಯೆ ಪರಿಹರಿಸುವಲ್ಲಿ ಪ್ರಧಾನ ಭೂಮಿಕೆ ವಹಿಸಬಲ್ಲವು ಎಂದಿದ್ದಾರೆ.
9ನೇ ಈಸ್ಟರ್ನ್ ಎಕನಾಮಿಕ್ ಫೋರಂ ನ್ನು ಉದ್ದೇಶಿಸಿ ಮಾತನಾಡುವಾಗ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಸಮಸ್ಯೆ ಪರಿಹರಿಸಲು ಸಹಾಯ ಹಸ್ತ ಚಾಚಿದ ಭಾರತದ ಪಾತ್ರದ ಕುರಿತು ಹೇಳಿದ್ದಾರೆ.
ಉಕ್ರೇನ್ ಜೊತೆಗಿನ ಸಂಘರ್ಷಕ್ಕೆ ಸಂಬಂಧಿಸಿದ ಎಲ್ಲ ರೀತಿ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಆಸಕ್ತಿ ತಳೆದಿರುವ ನಮ್ಮ ಎಲ್ಲ ಸ್ನೇಹಿತರು ಮತ್ತು ಪಾಲುದಾರರನ್ನು ನಾವು ಯಾವತ್ತೂ ಗೌರವಿಸುತ್ತೇವೆ. ಚೀನಾ, ಬ್ರೆಜಿಲ್, ಭಾರತ ಹೀಗೆ ನಾನು ನನ್ನ ಪಾಲುದಾರರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದರು.