ಸೈನಿಕ ಗಡಿಯಲ್ಲಿ ನಿದ್ದೆಗೆಟ್ಟು ನಿಂತು ಹೋರಾಡುತ್ತಿದ್ದರೇ, ಗಡಿಯೊಳಗಿನ ನಮ್ಮ ನಿದ್ಧೆಯೊಳಗೊಂದು ನೆಮ್ಮದಿ. ನಿಸ್ವಾರ್ಥ ಮನಸ್ಸಿನ ಆ ಜೀವಗಳು ದೇಶ ಸೇವೆ ಗೈಯ್ಯುತ್ತಿರುವವರೆಗೂ ನಾವು, ನಮ್ಮ ದೇಶ ಸದೃಢ ಮತ್ತು ಭದ್ರ! ಅಸಲಿಗೆ ಅಂಥ ಶ್ರೇಷ್ಠ ಭಾರತೀಯ ಸೈನ್ಯಕ್ಕೆ ನಮ್ಮ ಕರಾವಳಿಯ ಹುಡುಗ ಆಯ್ಕೆಗೊಂಡಿದ್ದಾನೆ ಎಂಬ ಹೆಮ್ಮೆಯ ಸುದ್ದಿ ಬಂದಿದೆ!.
ಹೌದು! ಆತ ಈಗ “ಭಾರತೀಯ ಸೈನ್ಯದ ಲೆಪ್ಟಿನೆಂಟ್ ಭರತ್!! ಉಡುಪಿ ಜಿಲ್ಲೆಯ, ಬೈಂದೂರು ತಾಲೂಕು, ನಾವುಂದ ಗ್ರಾಮದ ಬೊಬ್ಬರ್ ಮಕ್ಕಿ ಎಂಬಲ್ಲಿನ ವಾಸಿಯಾಗಿದ್ದ, ಭರತ್ ಬಾಬು ದೇವಾಡಿಗ ಚಿಕ್ಕಂದಿನಿಂದಲೇ ಸೈನ್ಯ ಸೇರುವ ಮಹದಾಸೆ ಹೊಂದಿದ್ದಾತ. ಬಾಬು ದೇವಾಡಿಗ ಹಾಗೂ ಶ್ರೀಮತಿ ರಾಗಿಣಿ ಬಿ. ದೇವಾಡಿಗ ದಂಪತಿಗಳ ಮಗನಾದ ಭರತ್ ದೇವಾಡಿಗ ಲೆಪ್ಟಿನೆಂಟ್ ಹುದ್ದೆ ಸೇರಿಕೊಂಡು ಭಾರತ ಮಾತೆಯ ಸೇವೆ ಆರಂಭಿಸಿದ್ದಾರೆ. ಸದ್ಯ ಅವರು ಸೇನಾ ಸಮವಸ್ತ್ರದೊಂದಿಗೆ ವೃತ್ತಿ ನಿರತರಾಗಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಸಖತ್ ವೈರಲ್ ಆಗಿವೆ.
ಪುಟ್ಟ ಹಳ್ಳಿಯೊಂದರ ಹುಡುಗ ತನ್ನ ಕನಸಿನಂತೆಯೇ ಶ್ರಮಿಸಿ, ಸಾಧಿಸಿ ಹೆಮ್ಮೆಯ ಭಾರತೀಯ ಸೈನ್ಯ ಸೇರಿದ್ದು, ಊರಿಗೆ ಊರೇ ಕೊಂಡಾಡುವಂತಾಗಿದೆ. ಭಾರತ ಮಾತೆಯ ಸೇವೆಗೆ ಸಮರ್ಪಿಸಿಕೊಂಡ ಲೆಪ್ಟಿನೆಂಟ್ ಭರತ್ ಬದುಕು ಹಸನಾಗಲಿ ಎಂಬುದು ಸದ್ಯ ಒಕ್ಕೊರಲ ಧ್ವನಿಯಾಗಿದೆ.
ಜೈ ಭಾರತ.. ಜೈ ಭರತ್..