ನವದೆಹಲಿ: ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಲೀಗ್ ಕೂಟದ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.
ಬ್ರಸೆಲ್ಸ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೀರಜ್ ಅರ್ಹತೆ ಪಡೆದಿದ್ದಾರೆ. 14 ಸುತ್ತುಗಳ ಲೀಗ್ ನಲ್ಲಿ ನೀರಜ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಒಟ್ಟು 14 ಅಂಕಗಳನ್ನು ಗಳಿಸಿದ್ದಾರೆ. ದೋಹಾ ಮತ್ತು ಲೂಸಾನ್ ಲೆಗ್ ಗಳಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಆದರೆ, ಅವರು ಗುರುವಾರ ನಡೆದ ಕೊನೆಯ ಸುತ್ತಿನಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಗ್ರೆನೆಡಾ ಆಯಂಡರ್ಸನ್ ಪೀಟರ್ಸ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಅವರು ಕ್ರಮವಾಗಿ 29 ಮತ್ತು 21 ಅಂಕ ಗಳಿಸಿ ಕ್ರಮವಾಗಿ ಮೊದಲೆರಡು ಸ್ಥಾನ ಗಳಿಸಿದ್ದಾರೆ.
ನೀರಜ್ ಅವರಿಗಿಂತ ಎರಡು ಅಂಕ ಹೆಚ್ಚು ಗಳಿಸಿರುವ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಚ ಮೂರನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು. ನೀರಜ್ ನಾಲ್ಕನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದರು. ನೀರಜ್ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನ ಮತ್ತು ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಡೈಮಂಡ್ ಲೀಗ್ ನಲ್ಲಿ ಕೂಡ 2022ರಲ್ಲಿ ಚಿನ್ನ ಹಾಗೂ 2023ರಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ಈ ಬಾರಿಯೂ ನೀರಜ್ ಚೋಪ್ರಾ ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ.