ಚಿಕ್ಕಮಗಳೂರು: ಯೋಗ ಗುರುವೊಬ್ಬಾತ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ.
ಅತ್ಯಾಚಾರದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಯೋಗ ಗುರುನನ್ನು ಬಂಧಿಸಿದ್ದಾರೆ. ಪ್ರದೀಪ್ ಉಲ್ಲಾಳ್ (53) ಬಂಧಿತ ಯೋಗ ಗುರು. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರದೀಪ್ ಉಲ್ಲಾಳ್ ಮಲ್ಲೇನಹಳ್ಳಿಯಲ್ಲಿ ಯೋಗ ಶಾಲೆ ನಡೆಸುತ್ತಿದ್ದ. ಈತನಿಗೆ ಕ್ಯಾಲಿಪೋರ್ನಿಯಾದ ಮಹಿಳೆ ಪರಿಚಯವಾಗಿದ್ದರು. ಅವರ ಮೇಲೆಯೇ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ.
ವಿದೇಶಿ ಮಹಿಳೆ ಕಳೆದ 4 ವರ್ಷಗಳಿಂದಲೂ ಯೋಗ ಗುರುವಿನೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಆದರೆ, ಬೇರೆ ಮಹಿಳೆಯರ ಜತೆಯೂ ಗುರುವಿನ ಸಂಬಂಧ ಇರುವುದನ್ನು ತಿಳಿದು ಜಗಳ ಮಾಡಿದ್ದರು. ಅಲ್ಲದೇ, ವಿದೇಶಿ ಮಹಿಳೆಯಿಂದ ಯೋಗ ಗುರು ಪ್ರದೀಪ್ ಸುಮಾರು 20 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾನೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ವಿಚಾರವಾಗಿಯೇ ಇಬ್ಬರ ಮಧ್ಯೆ ಜಗಳವಾಗಿದೆ. ಈಗ ವಿದೇಶಿ ಮಹಿಳೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರುವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.