ರಾಜ್‌ಕೋಟ್: ಮಗನೊಬ್ಬ ತನ್ನ ತಾಯಿಯನ್ನು ಕೊಲೆ ಮಾಡಿ, ಮಿಸ್ ಯೂ, ಕ್ಷಮಿಸು ಅಮ್ಮ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಟೋ ಅಪ್ಲೋಡ್ ಮಾಡಿರುವ ಘಟನೆ ನಡೆದಿದೆ.
ಗುಜರಾತ್ ನ ರಾಜ್‌ಕೋಟ್ ನಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಮಗನೇ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಾಗ ಆರೋಪಿ ಮಗ ತಾಯಿಯ ಮೃತದೇಹದ ಪಕ್ಕ ಕುಳಿತುಕೊಂಡಿದ್ದ ಎನ್ನಲಾಗಿದೆ.
ತಾಯಿಯನ್ನು 48 ವರ್ಷದ ಜ್ಯೋತಿಬೆನ್ ಗೋಸಾಯಿ ಎಂದು ಗುರುತಿಸಲಾಗಿದೆ. ಆರೋಪಿ ಮಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ನಂತರ ಆರೋಪಿ, ಇನ್ ಸ್ಟಾಗ್ರಾಂನಲ್ಲಿ ಅಮ್ಮನ ಫೋಟೋ ಹಂಚಿಕೊಂಡಿದ್ದಾನೆ. “ಕ್ಷಮಿಸು ಅಮ್ಮಾ, ನಾನು ನಿನ್ನನ್ನು ಕೊಂದೆ. ಐ ಮಿಸ್ ಯೂ. ಓಂ ಶಾಂತಿ” ಎಂದು ಬರೆದಿದ್ದಾನೆ. ಮತ್ತೊಂದು ಪೋಸ್ಟ್ ನಲ್ಲಿ, “ನಾನು ನನ್ನ ಅಮ್ಮನನ್ನು ಕೊಲೆ ಮಾಡಿದೆ. ನನ್ನ ಜೀವನಕ್ಕಾದ ನಷ್ಟ. ಕ್ಷಮಿಸು ಅಮ್ಮಾ. ಓಂ ಶಾಂತಿ. ಮಿಸ್ ಯೂ ಅಮ್ಮಾ” ಎಂದು ಬರೆದುಕೊಂಡಿದ್ದಾನೆ.
ಜ್ಯೋತಿ ಬೆನ್ ಅವರು ಕೆಲವು ವರ್ಷಗಳಿಂದ ಹೆಚ್ಚಿನ ಮಾನಸಿಕ ಅಸ್ವಸ್ಥತೆ ಎದುರಿಸುತ್ತಿದ್ದರು. ಹೀಗಾಗಿ ಮಗನೊಂದಿಗೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಮಗ ನೀಲೇಶ್ ಜನಿಸಿದ ಒಂದು ವರ್ಷದಲ್ಲಿಯೇ ಜ್ಯೋತಿಬೆನ್ ಅವರ ವೈವಾಹಿಕ ಸಂಬಂಧ ಮುರಿದು ಬಿದ್ದಿತ್ತು. ಸುಮಾರು 20 ವರ್ಷಗಳಿಂದ ಅವರು ನೀಲೇಶ್ ಜೊತೆಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
ಜ್ಯೋತಿಬೆನ್ ಅವರು ಮನೋರೋಗ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಘಟನೆಗೂ ಒಂದು ತಿಂಗಳು ಮುಂಚೆ ಔಷಧಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. ಈ ಕಾರಣದಿಂದ ಅವರ ಮಾನಸಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜ್ಯೋತಿಬೆನ್ ಅವರ ಮಾಜಿ ಪತಿ ಹಾಗೂ ಅವರ ಇನ್ನಿತರ ಮಕ್ಕಳು ಮೃತದೇಹವನ್ನು ಸ್ವೀಕರಿಸಲು ಹಾಗೂ ಅಂತ್ಯಕ್ರಿಯೆಯ ಜವಾಬ್ದಾರಿ ನಿರ್ವಹಿಸಲು ನಿರಾಕರಿಸಿದ್ದಾರೆ. ಹೀಗಾಗಿ ಪೊಲೀಸರೇ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಮಗನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.