ಮಹಾರಾಜ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಗುಲ್ಬರ್ಗಾ ಸೋಲಿಸಿ ಬೆಂಗಳೂರು ಫೈನಲ್ ಗೆ ಲಗ್ಗೆಯಿಟ್ಟಿದೆ.
ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳ ಮಧ್ಯೆ ನಡೆದ ಸೆಮೀಸ್ ನಲ್ಲಿ 9 ವಿಕೆಟ್ ಗಳಿಂದ ಗೆದ್ದ ಬೆಂಗಳೂರು ತಂಡ ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ತಂಡ 19.5 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 17 ಎಸೆತಗಳು ಬಾಕಿ ಇರುವಂತೆ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಫೈನಲ್ ಪ್ರವೇಶಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ತಂಡಕ್ಕೆ ಆರಂಭಿಕ ಲವ್ನಿತ್ ಸಿಸೋಡಿಯರನ್ನು ಬಿಟ್ಟರೆ ಉಳಿದವರು ಪರಿಣಾಮಕಾರಿಯಾಗಿ ಕಂಡು ಬರಲಿಲ್ಲ. ನಾಯಕ ದೇವದತ್ ಪಡಿಕ್ಕಲ್ ಕೇವಲ 13 ರನ್ ಗಳಿಗೆ ಔಟ್ ಆದರು. ಮೊದಲ ವಿಕೆಟ್ ಉರುಳುತ್ತಿದ್ದಂತೆ ಆಟಗಾರರು ಫೆವಲಿಯನ್ ಪರೇಡ್ ನಡೆಸಿದರು. ಬಿ.ಆರ್. ಶರತ್ 6, ಸ್ಮರಣ್ 10, ಅನೀಶ್ 7, ವೈಶಾಕ್ ವಿಜಯ್ 2, ಪೃಥ್ವಿರಾಜ್ 12, ರಿತೇಶ್ 17, ಪ್ರವೀಣ್ 26, ವಹೀದ್ 13 ರನ್ ಗಳಿಸಿದರು. ಪರಿಣಾಮ ತಂಡದ ಮೊತ್ತ 155 ರನ್ ಗಳಿಗೆ ನಿಂತಿತು. ಬೆಂಗಳೂರು ಪರ ಮೊಹ್ಸಿನ್ ಖಾನ್, ಲವೀಶ್ ಕೌಶಲ್, ಕ್ರಾಂತಿ ಕುಮಾರ್ ಹಾಗೂ ಶುಭಾಂಗ್ ಹೆಗ್ಡೆ ತಲಾ 2 ವಿಕೆಟ್ ಪಡೆದರೆ, ಸಂತೋಖ್ ಸಿಂಗ್ ಕೂಡ 1 ವಿಕೆಟ್ ಪಡೆದರು.
ಸವಾಲಿನ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭಿಕರಿಬ್ಬರು ಸ್ಫೋಟಕ ಆಟದ ಕೊಡುಗೆ ನೀಡಿದರು. ಎಲ್.ಆರ್. ಚೇತನ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ 10 ಓವರ್ ಗಳ ಮುಕ್ತಾಯದೊಳಗೆ ಶತಕದ ಗಡಿ ದಾಟಿ 104 ರನ್ ಗಳಿಸಿತ್ತು. ಚೇತನ್ ಕೇವಲ 20 ಎಸೆತಗಳಲ್ಲಿ ತಮ್ಮ ಅರ್ಧಶತಕ ಕೂಡ ಪೂರೈಸಿದರು. ಮಯಾಂಕ್ ಕೂಡ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಮಯಾಂಕ್ 37 ಎಸೆತಗಳಲ್ಲಿ 52 ರನ್ ಗಳಿಸಿದರು. ಮೊದಲ ವಿಕೆಟ್ ಗೆ ಆರಂಭಿಕರು 124 ರನ್ ಗಳಿಸಿದ್ದರು.
ಮಯಾಂಕ್ ಔಟಾದ ಬಳಿಕವೂ ತನ್ನ ಜವಬ್ದಾರಿ ಮರೆಯದ ಚೇತನ್ 51 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ ಅಜೇಯ 89 ರನ್ ಗಳಿಸಿ, ತಂಡವನ್ನು ಗೆಲುವಿನ ದಡ ದಾಟಿಸಿದರು. ಭುವನ್ ರಾಜ್ 15 ಎಸೆತಗಳಲ್ಲಿ 1 ಬೌಂಡರಿ ಸಹಿತ ಅಜೇಯ 13 ರನ್ ಗಳ ಕೊಡುಗೆ ನೀಡಿದರು.