ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು. ಇದರ ಬೆನ್ನಲ್ಲಿಯೇ ಈಗ ಐಪಿಎಲ್ ಗೂ ವಿದಾಯ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳುತ್ತಿದ್ದಂತೆ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಭಿಮಾನಿಗಳು ನಂಬಿದ್ದರು. ಆದರೆ, ಈಗ ಆ ಮಾದರಿಯ ಕ್ರಿಕೆಟ್ ಗೂ ಗುಡ್ ಬೈ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಶಿಖರ್ ಧವನ್ ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆಡಲಿದ್ದಾರೆ. ನಿವೃತ್ತ ಆಟಗಾರರು ಕಣಕ್ಕಿಳಿಯಲಿರುವ ಈ ಲೀಗ್ ನಲ್ಲಿ ಕಾಣಿಸಿಕೊಳ್ಳಲು ಬಿಸಿಸಿಐಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗುತ್ತದೆ. ಇದನ್ನು ಪಡೆದರೆ ಅವರು ಅರ್ಹತೆ ಪಡೆಯುತ್ತಾರೆ.
ಬಿಸಿಸಿಐ ನಿಯಮದಂತೆ, ಐಪಿಎಲ್ ಆಡುವ ಭಾರತೀಯ ಆಟಗಾರರು ಯಾವುದೇ ಫ್ರಾಂಚೈಸಿ ಲೀಗ್ ಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಇತರೆ ಲೀಗ್ ಗಳಲ್ಲಿ ಕಾಣಿಸಿಕೊಂಡರೆ ಅವರು ಐಪಿಎಲ್ ಗೆ ಅನರ್ಹರಾಗಲಿದ್ದಾರೆ. ಹೀಗಾಗಿಯೇ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರು ಐಪಿಎಲ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಸದ್ಯ ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆಡುವುದು ಖಚಿತವಾಗಿದೆ. ಈ ಟೂರ್ನಿಯಲ್ಲಿ ಕಾಣಿಸಿಕೊಂಡರೆ ಧವನ್ ಐಪಿಎಲ್ ಆಡಲು ಅನರ್ಹರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಐಪಿಎಲ್ ತೊರೆಯಲು ನಿರ್ಧರಿಸಿದ್ದಾರೆ. ಐಪಿಎಲ್ ನಲ್ಲಿ ಶಿಖರ್ ಧವನ್ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. 222 ಪಂದ್ಯವಾಡಿರುವ ಧವನ್ 2 ಶತಕ ಹಾಗೂ 51 ಅರ್ಧಶತಕಗಳೊಂದಿಗೆ ಒಟ್ಟು 6768 ರನ್ ಗಳಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.