ಮುಂಬೈ: ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಹಿಳೆಯರ ವಿರುದ್ಧದ ಅಪರಾಧಗಳು ಕ್ಷಮಿಸಲಾಗದ ಪಾಪ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುಡುಗಿದ್ದಾರೆ.
ಮಹಾರಾಷ್ಟ್ರದ ಜಲ್ಗಾಂವ್ ನಲ್ಲಿ ನಡೆದ ಲಕ್‌ಪತಿ ದೀದಿ ಸಮ್ಮೇಳನ (Lakhpati Didi Sammelan)ದಲ್ಲಿ ಮಾತನಾಡಿದ ಅವರು, ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಅವರ ಸುರಕ್ಷತೆಯ ಬಗ್ಗೆ ದೇಶ ಗಮನ ಹರಿಸುತ್ತದೆ. ಮಹಿಳೆಯರ ಸುರಕ್ಷತೆ ಬಗ್ಗೆ ನಾನು ಕೆಂಪು ಕೋಟೆಯಿಂದ ಪದೇ ಪದೆ ಹೇಳುತ್ತಿದ್ದೇನೆ. ದೇಶದ ಯಾವುದೇ ರಾಜ್ಯವಾಗಿರಲಿ ಅಲ್ಲಿನ ನನ್ನ ಸಹೋದರಿಯರು ಮತ್ತು ಹೆಣ್ಣುಮಕ್ಕಳ ನೋವು ಮತ್ತು ಕೋಪವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಮಹಿಳೆಯರ ಮೇಲಿನ ಅಪರಾಧವು ಕ್ಷಮಿಸಲಾಗದ ಪಾಪ ಎಂದು ಹೇಳಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವವರನ್ನೂ ಕ್ಷಮಿಸಬಾರದು. ಆಸ್ಪತ್ರೆ, ಶಾಲೆ, ಸರ್ಕಾರ ಅಥವಾ ಪೊಲೀಸ್ ವ್ಯವಸ್ಥೆಯಾಗಿರಲಿ ಯಾವುದೇ ಮಟ್ಟದಲ್ಲಿನ, ಚಿಕ್ಕ ನಿರ್ಲಕ್ಷ್ಯವನ್ನೂ ಸಹಿಸಲು ಸಾಧ್ಯವಿಲ್ಲ. ಅಪರಾಧದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಮೋದಿ ಅವರು ಸೂಚಿಸಿದ್ದಾರೆ.
ದೇಶದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹಾಗೂ ಮಹಿಳಾ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
