ಹಾಸನ: ಅಪಘಾತದಿಂದಾಗ ಸತ್ತರೆ ಕೋಟಿ ಕೋಟಿ ಜೀವ ವಿಮೆ ಹಣ ಬರುತ್ತದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನಂತೆಯೇ ಇರುವ ಅಮಾಯಕ ವ್ಯಕ್ತಿಯನ್ನು ಕೊಲೆ ಮಾಡಿ ತಾನೇ ಸತ್ತಂತೆ ಬಿಂಬಿಸಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹಣದಾಸೆಗೆ ಈತನ ಕೃತ್ಯಕ್ಕೆ ಕೈ ಜೋಡಿಸಿದ ಟ್ರಕ್ ಚಾಲಕ ಕೂಡ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಮುನಿಸ್ವಾಮಿಗೌಡ(49) ಹಾಗೂ ಚಿಕ್ಕಮಗಳೂರು ಜಿಲ್ಲೆಯ ಚಾಲಕ ದೇವೇಂದ್ರ ನಾಯಕ ಬಂಧಿತ ಆರೋಪಿಗಳು.
ಇತ್ತೀಚೆಗೆ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿ ಗೇಟ್ ಹತ್ತಿರ ಟವೆರಾ ಕಾರಿನ ಸ್ಟೆಪ್ನಿ ಬದಲಾಯಿಸುವಾಗ ಲಾರಿ ಗುದ್ದಿ ಸಾವು ಸಂಭವಿಸಿದೆ ಎಂದು ದೂರೊಂದು ದಾಖಲಾಗತ್ತು. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು. ಆನಂತರ ಹೊಸಕೋಟೆ ನಗರದ ಶಿಲ್ಪಾರಾಣಿ ಎಂಬುವವರು ಅಪಘಾತದಲ್ಲಿ ಸಾವನ್ನಪ್ಪಿರುವುದು ನನ್ನ ಗಂಡ ಮುನಿಸ್ವಾಮಿಗೌಡ ಎಂದು ಹೇಳಿ ಮೃತದೇಹ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದರು. ಆನಂತರ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ತನಿಖೆಯಲ್ಲಿ ಪೊಲೀಸರಿಗೆ ಸತ್ಯ ಗೊತ್ತಾಗಿದೆ. ಆನಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಚಾಲಕ ನೀಡಿದ ಮಾಹಿತಿ ಮೇರೆಗೆ ಮುನಿಸ್ವಾಮಿಗೌಡ ಇರುವ ಜಾಗ ಪತ್ತೆ ಮಾಡಿ ಆತನನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ವಿಚಾರಣೆ ನಡೆಸಿದಾಗ ಹೊಸಕೋಟೆಯಲ್ಲಿ ಟೈರ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೆ. ಅಂಗಡಿಯಲ್ಲಿ ನಷ್ಟವಾಗಿತ್ತು. ಆ ನಷ್ಟ ಸರಿದೂಗಿಸಲು ಮತ್ತು ಕೆಲವರ ಬಳಿ ಪಡೆದುಕೊಂಡಿದ್ದೆ. ಕೈಸಾಲ ತೀರಿಸುವುದು ಕಷ್ಟವಾಗಿತ್ತು. ಸಾಲ ತೀರಿಸಿ, ಆರ್ಥಿಕ ನಷ್ಟ ಸರಿ ದೂಗಿಸಿಕೊಳ್ಳಲು ಈ ರೀತಿ ಉಪಾಯ ಮಾಡಿದ್ದೆ. ಈಗಾಗಲೇ ಜೀವ ವಿಮಾ ನಿಗಮದಲ್ಲಿ ಹಲವು ಜೀವ ವಿಮಾ ಪಾಲಿಸಿ ಮಾಡಿಸಿದ್ದು. ಅಪಘಾತ ವಿಮೆಯ ಲಾಭಕ್ಕಾಗಿ ಹೀಗೆ ಮಾಡಿದ್ದೇನೆಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಅಪರಿಚಿತ ವ್ಯಕ್ತಿಯ ಮೇಲೆ ಲಾರಿ ಹತ್ತಿಸಿ ಕೊಲೆ ಮಾಡಿ, ಆತನೇ ಮುನಿಸ್ವಾಮಿಗೌಡ ಎಂದು ಬಿಂಬಿಸಲು ಯತ್ನಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.