ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ವರ್ಸಸ್ ರಾಜ್ಯಪಾಲರು ಎನ್ನುವಂತಾಗಿದೆ. ಈ ಮಧ್ಯೆ ಹೈಕಮಾಂಡ್ ಸಿದ್ದುಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ದೆಹಲಿ ನಾಯಕರನ್ನು ಭೇಟಿ ಮಾಡಿ ಬಂದಿರುವ ಸಿಎಂ ಸಿದ್ದು, ಚರ್ಚೆಯ ಕುರಿತು ಮಾತನಾಡಿದ್ದಾರೆ.
ನಾನು, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಲವು ಸಚಿವರು ದೆಹಲಿಗೆ ಹೋಗಿದ್ದೆವು. ರಾಜ್ಯದ ಬೆಳವಣಿಗೆ ಕುರಿತು ಹಾಗೂ ಮುಡಾ ಪ್ರಕರಣದ ಪಾದಯಾತ್ರೆ ಕುರಿತು ಚರ್ಚೆ ನಡೆಸಿದ್ದೇವೆ. ಮುಡಾ ವಿಚಾರವಾಗಿ ಬಿಜೆಪಿ ಪಾದಯಾತ್ರೆ ನಡೆಸಿದ್ದು, ನಾವು ಅದನ್ನು ರಾಜಕೀಯವಾಗಿ ಎದುರಿಸಿದ್ದೇವೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದು ತಪ್ಪು ಎಂದು ಹೇಳಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಕಾನೂನು ಬಾಹಿರ. ಈ ಕುರಿತು ಸಚಿವ ಸಂಪುಟ ಸಭೆಯ ನಿರ್ಣಯ ಕೂಡ ಕಳುಹಿಸಲಾಗಿದೆ. ಪ್ರಾಸಿಕ್ಯೂಷನ್ಗೆ ಅನುಮತಿ ಪ್ರಶ್ನಿಸಿ ಕೋರ್ಟ್ಗೂ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ಆಗಸ್ಟ್ 29ಕ್ಕೆ ಮುಂದೂಡಿಕೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಸರ್ಕಾರದ 11 ಬಿಲ್ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ವಾಪಸ್ ಕಳುಹಿಸಿರುವ ಬಿಲ್ಗಳು ಸದನದಲ್ಲಿ ಅನುಮೋದನೆಗೊಂಡವಾಗಿವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.


















