ಬೆಂಗಳೂರು: ಮನೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಲೈಂಗಿಕ ಕಿರುಕುಳ ನೀಡಿದ್ದು, ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದು ದೃಢಪಟ್ಟಿದೆ ಎಂದು ವಿಶೇಷ ತನಿಖಾ ಸಂಸ್ಥೆ (SIT) ನ್ಯಾಯಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.
ಹೊಳೆನರಸೀಪುರ ಠಾಣೆಯಲ್ಲಿ ಎಚ್.ಡಿ. ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ಸಂಸ್ಥೆ (SIT) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2,144 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸಂತ್ರಸ್ತ ಮಹಿಳೆಯು ಆರೋಪಿಗಳ ಮನೆಯಲ್ಲಿ 2019 ರಿಂದ 2022ರ ವರೆಗೆ ಕೆಲಸಕ್ಕೆ ಇದ್ದರು. ಎಚ್.ಡಿ. ರೇವಣ್ಣ ತನ್ನ ಪತ್ನಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಹಣ್ಣು ಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಪ್ರಜ್ವಲ್ ರೇವಣ್ಣ ಅತ್ಯಾಚಾರ ನಡೆಸಿರುವುದು ದೃಢಪಟ್ಟಿದೆ. ಸಂತ್ರಸ್ತೆಗೆ ಪೋನ್ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು.
ಬೆಂಗಳೂರಿನ ಬಸವನಗುಡಿ ಮನೆಯಲ್ಲಿ ಪ್ರಜ್ವಲ್ ರೇವಣ್ಣ, ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ, ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಲು ಪ್ರಜ್ವಲ್ ಕಾರಣ ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ, ಯಾರಿಗಾದರೂ ಈ ವಿಷಯ ಹೇಳಿದರೆ, ನಿನ್ನ ಪತಿಯನ್ನು ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದರು. ಮಗಳಿಗೂ ಇದೇ ಗತಿಯಾಗುತ್ತದೆ ಎಂದು ಹೆದರಿಸಿದ್ದರು ಎಂಬುವುದು ತನಿಖೆ ವೇಳೆ ದೃಢಪಟ್ಟಿದೆ. ವಿದೇಶಕ್ಕೆ ಹೋಗಿದ್ದು ಕೂಡ ಉದ್ಧೇಶ ಪೂರ್ವಕವಾಗಿ ಎಂಬುವುದು ದೃಢಪಟ್ಟಿದೆ.