ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
38 ವರ್ಷ ವಯಸ್ಸಿನ ಧವನ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಶಿಖರ್ ಧವನ್ 2022ರ ನಂತರದಿಂದ ಭಾರತ ತಂಡದಿಂದ ದೂರವೇ ಉಳಿದಿದ್ದರು. 2022ರ ಬಾಂಗ್ಲಾದೇಶ ಪ್ರವಾಸದ ನಂತರ ಧವನ್ ಭಾರತ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೂ ಅವರು ಅವಕಾಶದ ನಿರೀಕ್ಷೆಯಲ್ಲಿದ್ದರು. ಆಯ್ಕೆದಾರರು ಮಾತ್ರ ಅವರನ್ನು ಪರಿಗಣಿಸಿರಲಿಲ್ಲ. ದುಲೀಪ್ ಟ್ರೋಫಿಗೆ ಆಯ್ಕೆಯಾಗಿರುವ ನಾಲ್ಕು ತಂಡಗಳಲ್ಲೂ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಬೇಸರಗೊಂಡು ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ.
ನನ್ನ ಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಈ ಪ್ರಯಾಣದಲ್ಲಿ ನಾನು ನನ್ನೊಂದಿಗೆ ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆ ಹೊಂದಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ಜೈ ಹಿಂದ್!” ಎಂದು ಧವನ್ ವಿಡಿಯೋ ಮೂಲಕ ಹೇಳಿದ್ದಾರೆ.
ಜೀವನದಲ್ಲಿ ಮುನ್ನಡೆಯಲು ಪುಟ ತಿರುಗಿಸುವುದು ಮುಖ್ಯ. ಅದಕ್ಕಾಗಿಯೇ ನಾನು ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಶಿಖರ್ ಧವನ್ ಹೇಳಿದ್ದಾರೆ. 2010ರಲ್ಲಿ ಏಕದಿನ ಕ್ರಿಕೆಟ್ ಪ್ರವೇಶ ಮಾಡಿರುವ ಧವನ್, 167 ಏಕದಿನ ಪಂದ್ಯಗಳನ್ನಾಡಿ 17 ಶತಕ ಸೇರಿದಂತೆ 6,793 ರನ್ ಗಳಿಸಿದ್ದಾರೆ. 34 ಟೆಸ್ಟ್ ಪಂದ್ಯಗಳಲ್ಲಿ 58 ಇನಿಂಗ್ಸ್ ಆಡಿ 7 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 2315 ರನ್ ಗಳಿಸಿದ್ದಾರೆ. 68 ಟಿ20 ಪಂದ್ಯಗಳಲ್ಲಿ 11 ಅರ್ಧಶತಕಗಳೊಂದಿಗೆ ಒಟ್ಟು 1759 ರನ್ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಧವನ್, ಐಪಿಎಲ್ ನಲ್ಲಿ ಮಾತ್ರ ಕಾಣಿಸಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿರುವ ಧವನ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 38 ವರ್ಷದ ಆಟಗಾರನನ್ನು ಈ ಬಾರಿ ಪಂಜಾಬ್ ಕಿಂಗ್ಸ್ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ಮೆಗಾ ಹರಾಜಿನ ಮೂಲಕ ಶಿಖರ್ ಧವನ್ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಅವಕಾಶ ಸಿಗದಿದ್ದರೆ ಐಪಿಎಲ್ ಗೂ ಗುಡ್ ಬೈ ಹೇಳಲಿದ್ದಾರೆ.